ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರಿ ನೌಕರರೇ, ದೇಹ ತೂಕ ತಗ್ಗಿಸಿ

Vishwanath S
Updated On : 7 Dec 2013, 11:16 am

ಕ.ಪ್ರ.ವಾರ್ತೆ , ಶಿವಮೊಗ್ಗ ,  ಡಿ.6
ದಡೂತಿ ದೇಹದ ಸರ್ಕಾರಿ ನೌಕರರೇ, ಮುಂದಿನ ವರ್ಷದ ಕ್ರೀಡಾಕೂಟದೊಳಗೆ ಕನಿಷ್ಠ 5 ಕೆ.ಜಿ. ಭಾರ ಇಳಿಸಿಕೊಳ್ಳಿ...
- ಇಂತಹದ್ದೊಂದು ಸಲಹೆಯನ್ನು ಜಿಲ್ಲಾಧಿಕಾರಿಯವರು ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಶಾಖೆ ಆಶ್ರಯದಲ್ಲಿ ಶುಕ್ರವಾರ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಮಾತನಾಡಿದರು.
ನನ್ನ ಮಾತನ್ನು ಯಾರೂ ತಪ್ಪಾಗಿ ಅರ್ಥೈಸಬಾರದು, ಸರ್ಕಾರಿ ನೌಕರರೆಂದರೆ ಹೊಟ್ಟೆ ಬಿಟ್ಟುಕೊಂಡು, ದಪ್ಪವಾಗಿ ಇರುತ್ತಾರೆ ಎಂಬ ಭಾವನೆ ಇದೆ. ಆದ್ದರಿಂದ ನೌಕರರ ವ್ಯಾಯಾಮ, ಕ್ರೀಡೆಯಲ್ಲಿ ತೊಡಗುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಇದರಿಂದ ಕೆಲಸದ ಕಡೆ ಹೆಚ್ಚು ಆಸಕ್ತಿ ವಹಿಸಬಹುದು. ಆಯಾಸವಾಗುವುದಿಲ್ಲ ಎಂದು ತಿಳಿಸಿದರು.
ಸರ್ಕಾರಿ ನೌಕರರು ಹೆಚ್ಚು ಲವಲವಿಕೆಯಿಂದ ಕೆಲಸ ಮಾಡಬೇಕಾದರೆ ದೈಹಿಕ ದೃಢತೆ ಬಹುಮುಖ್ಯ. ಸರ್ಕಾರಿ ನೌಕರರಿಗೆ ತಮ್ಮ ಕಾರ್ಯಕ್ಷಮತೆ ಹೆಚ್ಚಿಸಲು ದೈಹಿಕ ದೃಢತೆ ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಪ್ರತಿದಿನವೂ ಕ್ರೀಡೆ ಅಥವಾ ವ್ಯಾಯಾಮದಂತಹ ಚಟುವಟಿಕೆ ತೊಡಗಿಸಿಕೊಳ್ಳುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ರೀಡೆ ಜೀವನಕ್ಕೆ ಮುಖ್ಯ: ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್ ಮಾತನಾಡಿ, ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಅಥವಾ ತಮ್ಮ ಕೆಲಸದ ಅವಧಿಯಲ್ಲಿ ಅತ್ಯಂತ ಸಕಾರಾತ್ಮಕ ಕರ್ತವ್ಯ ನಿರ್ವಹಣೆಗಾಗಿ ದೈಹಿಕ ಆರೋಗ್ಯ ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಪ್ರತಿ ನೌಕರರು ತಮಗಿಷ್ಟವಾದ ಒಂದು ಕ್ರೀಡೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿದಿನವೂ ಆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ಎರಡು ದಿನ ನಡೆಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗೆ ಜಿಲ್ಲಾಡಳಿತದ ಸಹಯೋಗದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧಿಗಳು ತಮ್ಮ ಸ್ಪರ್ಧೆಯನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಎಸ್. ಗೋಪಾಲ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ. ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ, ನೌಕರರ ಸಂಘದ ಕಾರ್ಯದರ್ಶಿ ಚಂದ್ರಪ್ಪ ಮತ್ತಿತರರು ಇದ್ದರು.
ಕುಣಿದು ಕುಪ್ಪಳಿಸಿದರು: ಪ್ರತಿನಿತ್ಯ ಒತ್ತಡದ ಕೆಲಸ, ಕಡತ ವಿಲೇವಾರಿ ಮಾಡುವ ಗೊಂದಲಗಳ ನಡುವೆ ಹೂತುಹೋಗುವ ಸರ್ಕಾರಿ ನೌಕರರು ಶುಕ್ರವಾರ ಕ್ರೀಡಾಚಟುವಟಿಕೆಯಲ್ಲಿ ಮಿಂದೆದ್ದರು. ಮೈ ಚಳಿ ಬಿಟ್ಟು ಆಟೋಟದಲ್ಲಿ ತೊಡಗಿಕೊಂಡರು.
ಕ್ರಿಕೆಟ್, ಓಟದ ಸ್ಪರ್ಧೆ, ವಾಲಿಬಾಲ್, ಫುಟ್ಬಾಲ್, ಅಥ್ಲೆಟಿಕ್, ಗುಂಡು ಎಸೆತ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಾದ ಭರತನಾಟ್ಯ, ನೃತ್ಯ, ನಾಟಕ. ಭಾವಗೀತೆ, ಸಿನಿಮಾ ಗೀತೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಸುಮಾರು 400 ಕ್ಕೂ ಅಧಿಕ ನೌಕರರ ಪಾಲ್ಗೊಂಡಿದ್ದಾರೆ. ಶನಿವಾರವೂ ಕ್ರೀಡಾಕೂಟ ಮುಂದುವರಿಯುವುದು.
ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ
ಸರ್ಕಾರಿ ನೌಕರರು ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ನೆಹರು ಕ್ರೀಡಾಂಗಣ ಮುಂಭಾಗ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಡಿ.6ರಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನವಾಗಿದೆ. ಆದರೆ, ಸರ್ಕಾರಿ ನೌಕರರು ಕ್ರೀಡಾಕೂಟ ಆಯೋಜನೆ ಮಾಡಿದಲ್ಲದೇ, ಕಾರ್ಯಕ್ರಮದಲ್ಲಿ ಅವರನ್ನು ಸ್ಮರಿಸಿ ಶೋಕಾಚರಣೆಯನ್ನೂ ಮಾಡಿಲ್ಲ. ಮನರಂಜನೆಯಲ್ಲಿ ತೊಡಗಿದ್ದಾರೆ. ಈ ರೀತಿ ರಾಷ್ಟ್ರೀಯ ನಾಯಕನಿಗೆ ಅಪಮಾನ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಭಾನುಪ್ರಸಾದ್, ಮೂರ್ತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement