ಮಾಹಿತಿ ಕಾಯ್ದೆಗೆ 'ಸಹಕಾರಿ' ಇಲ್ಲ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.7
ಸರ್ಕಾರದಿಂದ ಸೌಲಭ್ಯ ಪಡೆದ ಸಂಘ, ಸಂಸ್ಥೆ, ಟ್ರಸ್ಟ್‌ಗಳು ಅಗತ್ಯ ಬಿದ್ದಲ್ಲಿ ಮಾಹಿತಿ ಕಾಯ್ದೆಯಡಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತ ಡಿ. ತಂಗರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ಶನಿವಾರ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಸಹಾಯಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅನುಷ್ಠಾನ ಕುರಿತ ಕಾರ್ಯಾಗಾರದಲ್ಲಿ ಅವರು, ಸಹಕಾರಿ ಸಂಘ, ಸಂಸ್ಥೆಗಳು ಮಾಹಿತಿ ಕಾಯ್ದೆಗೆ ಒಳಪಡುವುದಿಲ್ಲ ಎಂದರು.
ಮಹಿತಿ ನೀಡಿಬೇಕು: ಒಂದು ವೇಳೆ ಸರ್ಕಾರದಿಂದ ನಿವೇಶನ, ಅನುದಾನ ಪಡೆದ ಸಂಸ್ಥೆಗಳಿಂದ ಸಾರ್ವಜನಿಕರು ಕಾಯ್ದೆಯಡಿಯಲ್ಲಿ ಮಾಹಿತಿ ಕೋರಿದರೆ ಮಾಹಿತಿ ನೀಡುವುದು ಅನಿವಾರ್ಯವಾಗಿದೆ.
ಆದರೆ, ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಎಲ್ಲಿಯೂ ಸ್ಪಷ್ಟವಾಗಿ ಉಲ್ಲೇಖ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಸಂಬಂಧ ನ್ಯಾಯಾಲಯದ ಮೇಟ್ಟಿಲೇರಿದರೆ ಕೋರ್ಟ್ ತೀರ್ಮಾನಕ್ಕೆ ಆಯೋಗ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಮಾಹಿತಿ ಹಕ್ಕು ಅಡಿಯಲ್ಲಿ ಬರುವ ಅರ್ಜಿಗಳಿಗೆ ಹಾರಿಕೆ ಉತ್ತರ ನೀಡಬೇಡಿ, ಹಾಗೆ ಮಾಡಿ ನಿಗದಿತ ಕಾಲಾವಧಿ ಮೀರಿದರೆ ಸೂಕ್ತ ದಂಡ ತೆರಬೇಕಾಗುತ್ತದೆ ಎಂದು ತಿಳಿಸಿದ ಅವರು, ಮಾಹಿತಿದಾರರು ಕೇಳುವ ಯಾವುದೇ ಮಾಹಿತಿಯನ್ನು 30ದಿನದೊಳಗೆ ಒದಗಿಸುವುದು ನಿಯಮ.
ಆದ್ದರಿಂದ ಕಚೇರಿಗೆ ಸಂಬಂಧಿಸಿದ ಸೆಕ್ಷನ್ 4(1)ಎ ಮತ್ತು 4(1)ಬಿ ಮಾಹಿತಿಯನ್ನು ತಯಾರಿಸಿರಬೇಕು. ಅಲ್ಲದೆ, ಮಾಹಿತಿ ಕೋರಿಬಂದ ಅರ್ಜಿಗಳನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲಹರಣ ಸಲ್ಲ: ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ನೀಡುವ ಅಧಿಕಾರವನ್ನು ಅಧಿನಿಯಮದಲ್ಲಿ ಸ್ಪಷ್ಟವಾಗಿ ನೀಡಿರುವುದರಿಂದ ಈ ಬಗ್ಗೆ ಮೇಲಧಿಕಾರಿಗಳ ಮಾರ್ಗದರ್ಶನ ಪಡೆಯುವ ಸಲುವಾಗಿ ಕಾಲಹರಣ ಮಾಡಬಾರದು ಎಂದರು.
ಕೆಲವು ಇಲಾಖೆಗಳಲ್ಲಿನ ಮಾಹಿತಿ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಅರ್ಜಿ ಬರುವುದಿಲ್ಲ ಎಂದು ಇಲಾಖೆಯಲ್ಲಿನ ಬೇರೆ ಬೇರೆ ವಿಭಾಗಕ್ಕೆ ವರ್ಗಾಯಿಸುವ ಕೆಲಸ ಮಾಡುತ್ತಾರೆ. ಹಾಗೆ ಮಾಡುವುದರಿಂದ ನಿಗದಿತ ಕಾಲಾವಧಿಯಲ್ಲಿ ಉತ್ತರ ನೀಡಲಾಗದೆ ದಂಡ ತೆರಬೇಕಾಗಿ ಬರುತ್ತದೆ. ಲಭ್ಯವಿರುವ ಮಾಹಿತಿಯನ್ನು ತಕ್ಷಣ ನೀಡುವ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
ಸಮರ್ಪಕವಾಗಿಲ್ಲ: ಸಾಕಷ್ಟು ಸರ್ಕಾರಿ ಕಚೇರಿಗಳಲ್ಲಿ ಇರುವ ದಾಖಲೆಗಳನ್ನು ಸಮರ್ಪಕವಾಗಿ ಜೋಡಣೆ ಮಾಡಿಲ್ಲದಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಪ್ರತಿ ವಾರಕ್ಕೊಮ್ಮೆ ಮಾಹಿತಿ ಅಧಿಕಾರಿಗಳು ಅರ್ಜಿ ದಾಖಲಾಗಿರುವ ಬಗ್ಗೆ ಹಾಗೂ ಅವುಗಳು ವಿಲೇವಾರಿ ಆಗಿರುವ ಬಗ್ಗೆ ಸಭೆ ಕರೆದು ಪರಿಶೀಲನೆ ನಡೆಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಮೊದಲಾದರು ಇದ್ದರು.