ದತ್ತಿ ಉಪನ್ಯಾಸ ಏರ್ಪಡಿಸಲು ಪರಿಷತ್ಗೆ ಮನವಿ
ಕ.ಪ್ರ.ವಾರ್ತೆ, ಸಾಗರ, ಡಿ.8
ಹಿರಿಯ ಸಾಹಿತಿ ಡಾ. ನಾ.ಡಿಸೋಜ ಕೇವಲ ಸಾಹಿತ್ಯದ ನಾಡಿಯಲ್ಲ. ಅವರು ಕನ್ನಡ ನಾಡಿನ ಜನಜೀವನದ ನಾಡಿ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ಇಲ್ಲಿನ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶೃಂಗೇರಿ ಶಂಕರಮಠ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ನಾ.ಡಿಸೋಜ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ನಾ.ಡಿಸೋಜ ಅವರಿಗೆ ಬರವಣಿಗೆ ಹಸಿವು ಇನ್ನೂ ಇಂಗಿಲ್ಲ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕಾರ್ಯನಿರ್ವಹಿಸಿರುವ ನಾಡಿ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರನ್ನು ಸನ್ಮಾನಿಸುವುದು ಎಂದರೆ ನಮ್ಮನ್ನು ನಾವು ಸನ್ಮಾನಿಸಿಕೊಂಡಂತೆ. ಬದುಕಿನ ಸತ್ಯ ಹಾಗೂ ಪರಿಸರ ಪರವಾದ ಬರವಣಿಗೆ ಮೂಲಕ ಅವರ ಸಾಧನೆ ಇಂದಿನ ಯುವ ಸಾಹಿತಿಗಳಿಗೆ ಮಾರ್ಗದರ್ಶಕವಾಗಿದೆ ಎಂದರು.
ವಿಪ್ರ ನೌಕರರ ಸಂಘದ ಸಂಸ್ಥಾಪಕ ಮ.ಸ. ನಂಜುಂಡಸ್ವಾಮಿ ಮಾತನಾಡಿ, ನಾ.ಡಿಸೋಜ ಅವರು 80ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಒಂದು ದಾಖಲೆಯಾಗಬೇಕು ಎನ್ನುವ ನಿಟ್ಟಿನಲ್ಲಿ ವಿಪ್ರ ನೌಕರರ ಸಂಘದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ 25000 ದತ್ತಿ ಉಪನ್ಯಾಸಕ್ಕೆ ನೀಡಲಾಗುತ್ತಿದೆ. ಡಾ.ನಾ.ಡಿಸೋಜ ದತ್ತಿ ಹೆಸರಿನಲ್ಲಿ ಪ್ರತಿವರ್ಷ ಮಲೆನಾಡಿನ ಕವಿಗಳು ವಿಷಯ ಕುರಿತು ಉಪನ್ಯಾಸ ಏರ್ಪಡಿಸಲು ಪರಿಷತ್ತಿಗೆ ಮನವಿ ಮಾಡಲಾಗುವುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ನಾ. ಡಿಸೋಜ, ಸಮ್ಮೇಳನಾಧ್ಯಕ್ಷನಾಗಿ ಘೋಷಣೆ ಆದಾಗಿನಿಂದ ಜನರು ತೋರಿಸುತ್ತಿರುವ ಪ್ರೀತಿ ಕಂಡು ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೇನೆ. ನನ್ನ ಬರಹ ನನ್ನ ಹೆಮ್ಮೆ ಅಲ್ಲ. ಅದು ನಿಮ್ಮ ಹಾರೈಕೆ. ಕನ್ನಡ ಭಾಷೆ ಬೆಳವಣಿಗೆಗೆ ನಾವು ಇನ್ನಷ್ಟು ಪರಿಶ್ರಮ ಪಡಬೇಕಾಗಿದೆ. ಭಾಷೆ ಉಳಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂದರು.
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ ಆರ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಗೋಡು ರಂಗಮಂಚದ ಅಧ್ಯಕ್ಷ ಕಾಗೋಡು ಅಣ್ಣಪ್ಪ, ಜಿ.ಎಸ್.ನಟೇಶ್, ವಿ.ಶಂಕರ್, ಅಶ್ವಿನಿಕುಮಾರ್, ಆರ್.ಅಚ್ಚುತರಾವ್ ಹಾಜರಿದ್ದರು.
ನಂತರ ಹಿರೇಮಗಳೂರು ಕಣ್ಣನ್, ನಟೇಶ್ ಮತ್ತು ನಚಿಕೇತ್ ಇವರಿಂದ “ÑÚMÑÛQÁÚ-ÑÚMÑÛÁÚ’ ವಿಷಯ ಕುರಿತು ಹರಟೆ ಕಾರ್ಯಕ್ರಮ ನಡೆಯಿತು.