ಮ್ಯಾರಥಾನ್ ಓಟಗಾರ ರಾಮು ಸಾವು
ಕನ್ನಡಪ್ರಭ ವಾರ್ತೆ ಟಿ ಶಿವಮೊಗ್ಗ ಟಿ ಡಿ.8
ಭಾರತವನ್ನು ಐದು ಬಾರಿ ಪ್ರತಿನಿಧಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಓಟಗಾರನೊಬ್ಬ ಜೀವನ ದುರಂತವಾಗಿ ಅಂತ್ಯಕಂಡಿದೆ.
ಶಿವಮೊಗ್ಗದ ಕ್ರೀಡಾಪಟು ರಾಮು (54) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಮೃತದೇಹ ತುಂಗಾ ಚಾನಲ್ನಲ್ಲಿ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.
ಅಥ್ಲೆಟಿಕ್ ಜೊತೆ ಉತ್ತಮವಾಗಿ ಈಜು ಬಲ್ಲವರಾಗಿದ್ದ ರಾಮು, ಆತ್ಮಹತ್ಯೆ ಮಾಡಿಕೊಂಡ ಸೂಚನೆಗಳಿರುವ ರೀತಿಯಲ್ಲೇ ಮೃತದೇಹ ಕಂಡುಬಂದಿರುವುದು ಹಲವಾರು ಅನುಮಾನಕ್ಕೂ ಕಾರಣವಾಗಿದೆ.
ಅಪರಿಮಿತ ಶ್ರಮಿಕ: ಹೆಸರು ಷಾಮಿಯಾನ ರಾಮು. ಶಿವಮೊಗ್ಗದಲ್ಲಿ ಈ ಹೆಸರು ಚಿರಪರಚಿತ. ಮೂಲತಃ ಮೇದಾರಿಕೆ ಕಸುಬು ಹೊಂದಿದ ಹುಡುಗನೊಬ್ಬ ಅಥ್ಲೆಟಿಕ್ ಆಗುವ ಕನಸು ಹೊತ್ತು, ಆ ದಿಕ್ಕಿನಲ್ಲಿ ಶ್ರಮಪಟ್ಟ ರಾಮು, ಮನೆಯ ಬಡತನ ಕಾರಣದಿಂದಾಗಿ ಮೂರನೇ ತರಗತಿಗೆ ಶಾಲೆಗೆ ಗುಡ್ಬೈ ಹೇಳಿದರು. ಆದರೆ, ಬಡತನ ತಮ್ಮ ಆಸೆಗೆ ಅಡ್ಡ ಬಾರದಂತೆ ನೋಡಿಕೊಂಡರು. ಹೊಟ್ಟೆಗೆ ಕಡಿಮೆಯಾದರೂ ಓಡುವುದನ್ನು ನಿಲ್ಲಿಸಲಿಲ್ಲ.
ಮುಂಬೈ, ದೆಹಲಿ, ಕೊಲ್ಕತ್ತಾ ಸೇರಿದಂತೆ ದೇಶದ ಅನೇಕ ಮಹಾನಗರಗಳಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮ್ಯಾರಥಾನ್ನಲ್ಲಿ ಪಾಲ್ಗೊಂಡು ಸಾಧನೆ ಮೆರೆದಿದ್ದಾರೆ. ಪ್ರಥಮ, ದ್ವಿತೀಯ ಸ್ಥಾನಗಳೊಂದಿಗೆ ಪದಕ, ಪ್ರಮಾಣ ಪತ್ರ ಗಿಟ್ಟಿಸಿಕೊಂಡರು.
ವಿಶೇಷವಾಗಿ ವಯಸ್ಕರ ವಿಭಾಗದ ಮ್ಯಾರಥಾನ್ನಲ್ಲಿ ಅವರ ಸಾಧನೆ ಅಪರೂಪದ್ದು. ದಾನಿಗಳು, ಆತ್ಮೀಯರು, ನೆರೆ ಹೊರೆಯವರ ಸಹಕಾರದಿಂದ ವಿದೇಶಕ್ಕೂ ಹೋಗಿ ಬಂದರು. ಬ್ಯಾಂಕಾಕ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ ಐದು ಬಾರಿ ಭಾರತ ಪ್ರತಿನಿಧಿಸಿದ್ದರು.
ಪಿ.ಟಿ. ಉಷಾ ಅವರೊಂದಿಗೂ ಒಡನಾಟ ಹೊಂದಿದ್ದ ಅವರು, ಅನೇಕ ಮಾರ್ಗದರ್ಶನ ಪಡೆದು ಪ್ರಮುಖ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ರಾಮು ಆತ್ಮೀಯರು ನೆನಪಿಸಿಕೊಳ್ಳುತ್ತಾರೆ.
4 ವರ್ಷಗಳ ಹಿಂದೆ ಜಪಾನ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದ ರಾಮುಗೆ ಆರ್ಥಿಕ ಮುಗ್ಗಟ್ಟು ತಡೆಯೊಡ್ಡಿತು. ಜೊತೆಗೆ ವಿಸಾ ಕೂಡ ಸಿಗಲಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ನಲ್ಲಿ ಸಾಧನೆಯ ಮೈಲಿಗಲ್ಲು ಸ್ಥಾಪಿಸುವ ಕನಸು ಕನಸಾಗಿಯೇ ಉಳಿಯಿತು.
ಇನ್ನೊಂದೆಡೆ ತಮ್ಮಂತೆ ಆಸಕ್ತ ಮಕ್ಕಳ ಪ್ರತಿಭೆ ಮಸುಕಾಗಬಾರದೆಂಬ ಕಾರಣಕ್ಕೆ, ಬಡ ಮಕ್ಕಳಿಗೆ ಸೂಕ್ತ ಮ್ಯಾರಥಾನ್ ತರಬೇತಿ ಕೊಡುತ್ತಿದ್ದರು. ಇವರ ಗರಡಿಯಲ್ಲಿ ಪಳಗಿದ ಅನೇಕರು ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ.
ಸಂತಾಪ: ರಾಮು ನಿಧನಕ್ಕೆ ಜಿಲ್ಲಾ ಓಲಿಂಪಿಕ್ ಅಸೋಸಿಯೇಷನ್ನ ಶಶಿ, ಬಿಜೆಪಿ ಮುಖಂಡ ಡಿ.ಎಸ್. ಅರುಣ್, ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ರಾಯಲ್ ಮಾಧವಾಚಾರ್ ಸಂತಾಪ ಸೂಚಿಸಿದ್ದಾರೆ.
ಸಾವಿಗೆ ಕಾರಣ ತಿಳಿದಿಲ್ಲ
ಇತ್ತೀಚೆಗೆ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟ ಪರಿಣಾಮ ಮಾನಸಿಕವಾಗಿ ಕುಗ್ಗಿದ್ದರು. ಯಾರ ಮೇಲೂ ಅವಲಂಬಿತರಾಗದೆ ಜೀವನ ಸಾಗಿಸುತ್ತಿದ್ದರು ಎಂದು ಅವರ ಆತ್ಮೀಯರಾಗಿದ್ದ ರಾಯಲ್ ಪ್ರಿಂಟಿಂಗ್ ಪ್ರೆಸ್ನ ಮಾಧವಾಚಾರ್ ನೆನಪಿಸಿಕೊಳ್ಳುತ್ತಾರೆ. ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರಿಗೆ ರಾಮು ಎಂದರೆ ಅಪರಿಮಿತ ಪ್ರೇಮ. ಅನೇಕ ಸಂದರ್ಭಗಳಲ್ಲಿ ಸ್ಪರ್ಧೆಗೆ ಹೊರಡುವ ಮುನ್ನ ಆರ್ಥಿಕ ನೆರವು ಕಲ್ಪಿಸಿ ಕಳುಹಿಸಿಕೊಟ್ಟಿದ್ದರು. ಸೋಮವಾರ ಬೆಳಗ್ಗೆ ರಾಮು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.