ಶಿಕ್ಷಕರು ಕೌಶಲ್ಯ ಅಧ್ಯಯನ ಮಾಡಲಿ
ಶಿವಮೊಗ್ಗ: ಹೊರ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಜ್ಞಾನದ ಆವಾಹನೆ ಕಡಿಮೆ ಇದೆ ಎಂದು ಅಂತಾರಾಷ್ಟ್ರೀಯ ತರಬೇತುದಾರ ಚೇತನ್ರಾವ್ ಅಭಿಪ್ರಾಯಪಟ್ಟರು. ರೋಟರಿ ಮಿಡ್ಟೌನ್ ಭಾನುವಾರ ಸಂಜೆ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಆಯೋಜಿಸಿದ್ದ 21ನೇ ಶತಮಾನದ ಸವಾಲುಗಳನ್ನು ಎದುರಿಸುವ ಬಗ್ಗೆ- ನೀವಲ್ಲದೆ ಇನ್ನಾರು, ಈಗಲ್ಲದೆ ಇನ್ಯಾವಾಗ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ಇಂದಿನ ಪೋಷಕರು ಮಕ್ಕಳಲ್ಲಿ ಜ್ಞಾನದ ಆವಾಹನೆ ಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ. ಆದರಿಂದ ಮಕ್ಕಳನ್ನು ದೈಹಿಕ, ಮಾನಸಿಕವಾಗಿ ಸದೃಢಗೊಳಿಸಬೇಕು ಎಂದು ಕರೆ ನೀಡಿದರು. ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡುವ ಕೌಶಲ್ಯಗಳ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಅಗತ್ಯವಿದೆ. ಇದರೊಂದಿಗೆ ಶಿಕ್ಷಣ ನೀಡುವ ಮಾರ್ಗವನ್ನು ಕೂಡ ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸಮಾಜದಲ್ಲಿ ವ್ಯಕ್ತಿತ್ವ ದೊಡ್ಡದಾಗುವ ಬದಲು ಸಂಕುಚಿತವಾಗುತ್ತಿದೆ. ಇಂದಿನ ಕೆಲವರು ನಾಯಕತ್ವ ಎಂದರೆ ತಾವು ಮಾತ್ರ ಬೆಳೆಯುವುದು ಎಂದುಕೊಂಡಿದ್ದಾರೆ. ನಿಜವಾದ ನಾಯಕತ್ವ ಎಂದರೆ ಬೇರೆಯವರನ್ನು ಬೆಳೆಸುವುದು. ಆಗ ಸಮಾಜ ಕೂಡ ಅಂತಹ ವ್ಯಕ್ತಿಗಳನ್ನು ಸದಾ ನೆನಪಿಟ್ಟುಕೊಳ್ಳುತ್ತದೆ ಎಂದು ಉದಾಹರಣೆಯೊಂದಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಮಿಡ್ಟೌನ್ ಸದಸ್ಯರು ಇದ್ದರು.