ರಜೆಗೆ ಲಂಚ ಕೊಡದ್ದಕ್ಕೆ ಗುದ್ದು!
ಶಿವಮೊಗ್ಗ: ರಜೆಗಾಗಿ ಲಂಚ ನೀಡಲು ನಿರಾಕರಿಸಿದ ಕೆಎಸ್‌ಆರ್‌ಟಿಸಿ ನಿರ್ವಾಹಕ ಕಂ ಚಾಲಕನೊಬ್ಬನಿಗೆ ಹಿರಿಯ ಅಧಿಕಾರಿಯೊಬ್ಬರು ಎದೆಗೆ ಗುದ್ದಿ, ಕಚೇರಿಯಿಂದ ಹೊರ ಹಾಕಿದ ಘಟನೆ ಶಿವಮೊಗ್ಗದಲ್ಲಿ ಸೋಮವಾರ ನಡೆದಿದೆ. ಇಂಥ ದೌರ್ಜನ್ಯಕ್ಕೊಳಗಾದ ನೌಕರನ ಹೆಸರು ಆಂಜನೇಯ. ತೀವ್ರಪೆಟ್ಟು ಬಿದ್ದಿದ್ದರಿಂದ ಎದೆ ನೋವು ಕಾಣಿಸಿಕೊಂಡು ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಏನಾಗಿತ್ತು?: ಎರಡು ದಿನ ರಜೆ ಕೋರಿ ಆಂಜನೇಯ ಅವರು ಅರ್ಜಿ ಸಲ್ಲಿಸಿದ್ದರು. ಹೋಗಿ ಬಾ ಎಂದು ಸಂಬಂಧಪಟ್ಟ ಅಧಿಕಾರಿ ಸೂಚಿಸಿದರು. ಆಂಜನೇಯ ರಜೆ ಮುಗಿಸಿ ವಾಪಸು ಬಂದು ನೋಡಿದಾಗ ಒಂದು ದಿನ ರಜೆ, ಮತ್ತೊಂದು ದಿನ ಗೈರು ಎಂದು ಆ ಅಧಿಕಾರಿ ನಮೂದಿಸಿದ್ದರು. ರಜೆ ಚೀಟಿ ಕೊಟ್ಟು ಹೋಗಿದ್ದರೂ ಏಕೆ ಹೀಗೆ ಎಂದು ಆಂಜನೇಯ ಪ್ರಶ್ನಿಸಿದ್ದಾರೆ. ಆಗ ಅಧಿಕಾರಿ ಬಾಯಿಗೆ ಬಂದಂತೆ ಬಯ್ದು, ರಜೆ ಎಂದು ನಮೂದಿಸಬೇಕಿದ್ದರೆ 500 ಕೊಡಬೇಕು ಎಂದು ತಮ್ಮ ಕೊಠಡಿಯಿಂದ ತಳ್ಳಿ ರೂಟ್‌ಗೆ ಹೋಗುವಂತೆ ಸೂಚಿಸಿದ್ದಾರೆ. ಆಂಜನೇಯ ಅವರು ಪರಿಪರಿಯಾಗಿ ಕೇಳಿಕೊಂಡರೂ ಅಧಿಕಾರಿ ಕೇಳಲಿಲ್ಲ. ಕೊನೆಗೆ ಆಂಜನೇಯ ಅವರ ಎದೆಗೆ ಗುದ್ದಿ ಹೊರ ಕಳುಹಿಸಿದ್ದಾರೆ. ನಿಗದಿಪಡಿಸಿದ್ದ ಹಾರ್ನಹಳ್ಳಿ ಟ್ರಿಪ್ ಮುಗಿಸಿ ವಾಪಸು ಬಂದಾಗ ಎದೆನೋವು ಹೆಚ್ಚಾಗಿದೆ. ಆಗ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ತುಂಬ ಕಿರುಕುಳ ಕೊಡ್ತಾರೆ: ಈ ಕುರಿತು 'ಕನ್ನಡಪ್ರಭ'ದ ಮುಂದೆ ಅಳಲು ತೋಡಿಕೊಂಡ ಆಂಜನೇಯ ಅವರು, 'ಅಧಿಕಾರಿಗಳು ತುಂಬಾ ಕಿರುಕುಳ ಕೊಡುತ್ತಾರೆ. ರಜೆ ಕೇಳಿದರೆ 500 ಲಂಚ ಕೇಳ್ತಾರೆ. ನಾನು ಬಡವ, ಮೂವರು ತಂಗಿಯರಿದ್ದಾರೆ. ಕುಟುಂಬ ನಿರ್ವಹಣೆಯೇ ಕಷ್ಟ. ಹೀಗಿರುವಾಗ ಹಣ ಕೇಳಿದರೆ ಎಲ್ಲಿಂದ ತರಲಿ? 4 ತಿಂಗಳ ಹಿಂದೆ ನನ್ನ ಅಮ್ಮನಿಗೆ ಹೃದಯ ಶಸ್ತ್ರಚಿಕಿತ್ಸೆಯಾಯಿತು. ಹೀಗಾಗಿ ರಜೆ ಹಾಕಿ ಹೋಗಿದ್ದೆ. ಆದರೆ, ರಜೆ ಎಂದು ಪರಿಗಣಿಸದೇ ಮೂರು ಸಾವಿರ ರುಪಾಯಿ ದಂಡ ಹಾಕಿದ್ದಾರೆ' ಎಂದು ಹೇಳಿದರು.