15ರಂದು ಸಾಹಿತ್ಯ ಹುಣ್ಣಿಮೆಗೆ ನೂರರ ಸಂಭ್ರಮ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ಹುಣ್ಣಿಮೆ ದಿನದಂದು ಆಯೋಜಿಸುತ್ತಿರುವ ಸಾಹಿತ್ಯ ಹುಣ್ಣಿಮೆಗೆ ಈಗ ನೂರರ ಸಂಭ್ರಮ. 15ರಂದು ನೂರನೇ ಕಾರ್ಯಕ್ರಮವು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಗುಂಡಪ್ಪ ಶೆಡ್ ಮಲ್ಲೇಶ್ವರ ನಗರ ಬಡಾವಣೆಯಲ್ಲಿ ಸಂಜೆ ನಡೆಯಲಿದೆ.
ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಅವರು ಮಂಗಳವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.
2005ರ ಮಾರ್ಚ್ ತಿಂಗಳಲ್ಲಿ ಆರಂಭವಾದ ಮನೆ-ಮನ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯು ಅಂದೂ ಸಹ ಈಶ್ವರಪ್ಪರ ನಿವಾದಲ್ಲಿಯೇ ಆಗಿತ್ತು. ನಂತರ ಪ್ರತಿ ತಿಂಗಳೂ ನಗರದ ವಿವಿಧ ಬಡಾವಣೆಗಳಲ್ಲಿ ನಡೆದುಕೊಂಡು ಬರಲಾಗುತ್ತಿದೆ. ಇವರು ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ 40ನೇ, ಎರಡನೇ ಅವಧಿಯಲ್ಲಿ 80ನೇ ಕಾರ್ಯಕ್ರಮ ನಡೆದರೆ, ಈಗ ಮೂರನೇ ಅವಧಿಯಲ್ಲಿ 100ನೇ ಕಾರ್ಯಕ್ರಮ ನಡೆಯುತ್ತಿದೆ. ಈಶ್ವರಪ್ಪ ಅವರ ಪುತ್ರ ಕೆ. ಇ. ಕಾಂತೇಶ್ ಅವರ ಆತಿಥ್ಯದಲ್ಲಿ ನಡೆಯುಲಿದೆ.
ಉದ್ಘಾಟನೆ: ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ನಾಡೋಜ ಡಾ. ಮಹೇಶ್ ಜೋಷಿ ಉದ್ಘಾಟಿಸಲಿದ್ದಾರೆ. ಹುಣ್ಣಿಮೆಯ ಹೆಜ್ಜೆಗುರುತು ನೆನಪಿನ ಸಂಚಿಕೆ ಮತ್ತು ಕವಿ ನೂರ್ ಸಮದ್ ಅಬ್ಬಲಗೆರೆ ಅವರು ಬರೆದ ಅಂಕುರ ಚುಟುಕು ಕವನ ಸಂಕಲನ ಬಿಡುಗಡೆಯನ್ನು ಕೆ.ಎಸ್. ಈಶ್ವರಪ್ಪ ನೆರೆವೇರಿಸುವರು. ಗಂಗಾವತಿಯ ಪ್ರಾಣೇಶ್ ಅವರ ಹಾಸ್ಯ ಕಾರ್ಯಕ್ರಮವಿದೆ. ಇದುವರೆಗೆ ಸಾಹಿತ್ಯ ಹುಣ್ಣಿಮೆಗೆ ಆತಿಥ್ಯ ನೀಡಿದ್ದ ಎಲ್ಲಾ ಕುಟುಂಗಳು ಸಕುಟುಂಬ ಸಹಿತರಾಗಿ ಬಂದು 99 ದೀಪ ಬೆಳಗಿಸಲು ಆಹ್ವಾನಿಸಲಾಗಿದೆ.
ನಗರದ ಎಲ್ಲಾ ಬಡಾವಣೆಗಳಿಂದ ಜನರು ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಕಾರ್ಯಕ್ರಮ ಮುಗಿಸಿ ವಾಪಾಸು ಹೋಗಲು ರಾತ್ರಿ 10 ಗಂಟೆಗೆ ನಗರ ಸಾರಿಗೆ ಬಸ್ಸು ಮಾಲೀಕರ ಸಂಘದವರು ವಿಶೇಷ ಬಸ್ಸುಗಳ ಸೌಲಭ್ಯ ಮಾಡಲು ಒಪ್ಪಿದ್ದಾರೆ.