ಪ್ರೇಕ್ಷಕರ ಮೈ ಚಳಿ ಬಿಡಿಸಿದ ನೃತ್ಯ ಪ್ರದರ್ಶನ
ಶಿವಮೊಗ್ಗ: ಅದೊಂದು ಸುಂದರ ಕಾರ್ಯಕ್ರಮ. ವಿದ್ಯಾರ್ಥಿಗಳ ಅದ್ಬುತ ನೃತ್ಯಕ್ಕೆ ನೆರೆದಿದ್ದ ಕಲಾಸಕ್ತರು ಮೈಚಳಿ ಬಿಟ್ಟು ವೀಕ್ಷಣೆ ಮಾಡಿದರು. ಚಪ್ಪಾಳೆ, ಸಿಳ್ಳೆಗಳೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಂಗಳವಾರ ನಗರ ಸೈನ್ಸ್ ಮೈದಾನದಲ್ಲಿ ಆಯೋಜಿಸಿದ್ದ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡಬಂತು.
ಮೋಹಿನಿಯಾಟ್ಟಂ, ಆಂಧ್ರದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಭರತನಾಟ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಮಣಿಪುರಿ ದೋಲ್ ಚಲಮ್ಮುತ್ತು ಪುಂಗ್ ಚಲಂ, ಬಡಗು ಯಕ್ಷಪ್ರಯೋಗ, ಒಡಿಸ್ಸಿ ಶಾಸ್ತ್ರೀಯ ನೃತ್ಯ, ಗೋಟಿಪೂವ, ಕಂಟೆಂಪರರಿ ನೃತ್ಯ ಆಂಗಿಕಂ ಮತ್ತು ವಂದೇ ಮಾತರಂ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ, ಕೇರಳ ಸೆಮಿಕ್ಲಾಸಿಕ್ ನೃತ್ಯ, ತೆಂಕು ಯಕ್ಷಗಾನ ಪ್ರಯೋಗ, ಕಥಕ್, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹದ ಬೇಟೆ ನೃತ್ಯಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ. ಮೋಹನ ಆಳ್ವಾ, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಎಸ್.ಪಿ. ದಿನೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತಿತರರು ಇದ್ದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ನಗರದ ಅಥ್ಲೆಟಿಕ್ ಶಾಮಿಯಾನ ರಾಮು, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.