ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿವಿ ಕಟ್ಟುವ ಒಡೆಯರ್ ಕನಸು ನನಸಾಗಲೇ ಇಲ್ಲ

Mainashree
Updated On : 11 Dec 2013, 11:09 am

ಶಿವಮೊಗ್ಗ: ನಾನೊಂದು ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ಇಚ್ಛೆ ಇದೆ. ಆದರೆ, ಸರ್ಕಾರಿ ವ್ಯವಸ್ಥೆ ನನಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ವಿಶ್ವವಿದ್ಯಾಲಯ ಆರಂಭಿಸುವುದಂತೂ ಖಚಿತ...
ಹೀಗೆಂದು ಹೇಳಿದ್ದರು ಶ್ರೀಕಂಠದತ್ತ ಒಡೆಯರ್. ನಾಲ್ಕು ವರ್ಷದ ಹಿಂದಿನ ಘಟನೆಯದು. ಶಿಕ್ಷಣಕ್ಕೆ ಒತ್ತು ಕೊಡಬೇಕೆಂಬ ಉದ್ದೇಶದಿಂದ ತಮ್ಮದೇ ಶೈಲಿಯಲ್ಲಿ ದೇಶದಲ್ಲೇ ಅಪರೂಪದ ವಿಶ್ವವಿದ್ಯಾಲಯ ಕಟ್ಟುವ ಕನಸು ಹೊತ್ತವರು ಶ್ರೀಕಂಠದತ್ತ ಒಡೆಯರ್.
ಈಗಲೇ ಸುದ್ದಿ ಬರೀಬೇಡಿ: ಈ ವಿಚಾರವಾಗಿ ಅಂದು ಪ್ರತಿಕ್ರಿಯೆ ಕೇಳಿದ 'ಕನ್ನಡಪ್ರಭ'ಕ್ಕೆ ಒಡೆಯರ್ ಹೇಳಿದ್ದು ಹೀಗೆ, ನನಗೆ ವಿಶ್ವವಿದ್ಯಾಲಯ ಮಾಡಬೇಕು, ಶಿಕ್ಷಣ ಕ್ಷೇತ್ರಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಆಸೆ ಇದೆ. ಆದರೆ, ಈಗಿನ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯ ಆರಂಭಿಸುವುದು ಅಷ್ಟು ಸುಲಭವಲ್ಲ. ನೀವು ಈಗಲೇ ಸುದ್ದಿಗಿದ್ದಿ ಬರೀಬೇಡಿ... ಪ್ರಕ್ರಿಯೆಗೆ ಹಿನ್ನಡೆ ಆಗಬಹುದು. ಕೆಲಸ ಆದ ಮೇಲೆ ನಾನೇ ಕರೆಯುತ್ತೇನೆ. ನಾನು ವಿಶ್ವವಿದ್ಯಾಲಯವನ್ನು ಮಾಡೇ ಮಾಡುತ್ತೇನೆ. ಎಲ್ಲಾ ವ್ಯವಸ್ಥೆಗಳಾಗಿವೆ ಎಂದಿದ್ದರು ಒಡೆಯರ್.
 ನೀವು ಸುದ್ದಿ ಬರೆದರೆ ಬೇರೆ ಬೇರೆ ರೀತಿಯ ಒತ್ತಡ ಬರಬಹುದು. ಸರ್ಕಾರಿ ವ್ಯವಸ್ಥೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನನಗೆ ಲಂಚಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ಇಷ್ಟವಿಲ್ಲ. ಲಂಚ ಕೊಡದೇ ಅವರು ಕೆಲಸ ಮಾಡುವುದಿಲ್ಲ ಎಂದಿದ್ದರು.
ಲಂಚ ಕೊಡಲು ಮನಸ್ಸಿರಲಿಲ್ಲ: ಈ ಘಟನೆಗೆ ಸಾಕ್ಷಿಯಾಗಿದ್ದ ಹಿರಿಯ ಶಿಕ್ಷಣ ತಜ್ಞ ಹಾಗೂ ಒಡೆಯರ್ ಒಡನಾಡಿ ಚಾಂಬಿ ಪುರಾಣಿಕ್ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿ, ಒಡೆಯರ್ ಅವರಿಗೆ ವಿಶ್ವವಿದ್ಯಾಲಯ ಮಾಡುವುದು ಚಿಟಿಕೆ ಹೊಡೆದಷ್ಟೇ ಸುಲಭ. ದೊಡ್ಡ ದೊಡ್ಡ ವ್ಯಕ್ತಿಗಳು ಅವರಿಗೆ ಗೊತ್ತಿತ್ತು. ಕೇಂದ್ರ ಸರ್ಕಾರದ ಮಟ್ಟದಲ್ಲೂ ಅವರ ಆತ್ಮೀಯರಿದ್ದಾರೆ. ಆದರೆ, ಸರ್ಕಾರಿ ವ್ಯವಸ್ಥೆಯಲ್ಲಿ ಲಂಚ ಕೊಟ್ಟು ಕೆಲಸ ಮಾಡಿಸುವುದಕ್ಕೆ ಅವರು ಮನಸ್ಸು ಒಪ್ಪದ ಕಾರಣ ಕೊಂಚ ಹಿನ್ನಡೆಯಾಗಿತ್ತು ಎಂದು ನೆನಪಿಸಿಕೊಂಡರು.
ಇತಿಹಾಸ, ಪ್ರವಾಸೋದ್ಯಮ, ಪ್ರಾಚ್ಯವಸ್ತು, ಆತಿತ್ಯ, ಹೋಟೆಲ್ ಮ್ಯಾನೇನೇಜ್‌ಮೆಂಟ್ ಸೇರಿದಂತೆ ನಮ್ಮ ಸಂಸ್ಕೃತಿ ಪರಂಪರೆ ಕುರಿತಂತೆ ದೇಶದಲ್ಲೇ ವಿಶೇಷವೆನಿಸಿದ ಖಾಸಗಿ ವಿಶ್ವವಿದ್ಯಾಲಯ ಮಾಡುವ ಕನಸು ಅವರದ್ದಾಗಿತ್ತು. ಈ ಸಂಬಂಧ ಪ್ರಕ್ರಿಯೆಗಳೂ ನಡೆದಿದ್ದವು. ಈ ಕನಸು ಕಟ್ಟಿದ ಒಡೆಯರ್ ಅವರೇ ಇಲ್ಲ ಎಂಬುದು ನನಗೆ ದಿಗ್ಭ್ರಮೆಯಾಗಿದೆ ಎಂದು ಅವರು ತಿಳಿಸಿದರು.
ವಿವಿ ಸ್ಥಾಪನೆಗೆ ಯತ್ನ: ಒಡೆಯರ್ ಇಂದು ನಮ್ಮೊಂದಿಗಿಲ್ಲದಿರಬಹುದು. ಆದರೆ, ಅವರ ಚಿಂತನೆಗಳು, ಒಳ್ಳೆತನಗಳು ಎಂದಿಗೂ ಇರುತ್ತವೆ. ಅವರ ಆಶಯಗಳನ್ನು ಈಡೇರಿಸುತ್ತೇವೆ. ಮುಂದಿನ ದಿನಗಳಲ್ಲಿ ಅವರ ಕುಟುಂಬದವರೊಂದಿಗೆ ಚರ್ಚಿಸಿ, ಅವರ ಮಾರ್ಗದರ್ಶನದಂತೆ ವಿಶ್ವವಿದ್ಯಾಲಯ ಆರಂಭ ಕುರಿತು ನಿರ್ಧರಿಸಲಾಗುತ್ತೆಂದು ಹೇಳುವಾಗ ಚಾಂಬಿ ಪುರಾಣಿಕ್ ಅವರ ದುಃಖ ಉಮ್ಮಳಿಸಿ ಬಂದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement