ಶಿವಮೊಗ್ಗಕ್ಕೆ 24 ಗಂಟೆ ನೀರು
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ದಿನದ 24 ಗಂಟೆ ನೀರು ಸರಬರಾಜಾಗುವ ಮಹತ್ವದ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಯೋಜನೆಯ ಪ್ರಕ್ರಿಯೆ ಇದೀಗ ಆರಂಭವಾಗಿದ್ದು, ಪೂರ್ಣಗೊಳ್ಳಲು ಮೂರು ವರ್ಷದ ಗಡುವು ಹಾಕಿಕೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಯೋಜನೆಯ ಅನುಷ್ಠಾನಕ್ಕಾಗಿ ನಗರ ನೀರು ಪೂರೈಕೆ ವ್ಯವಸ್ಥೆಯನ್ನು ಸದ್ಯದಲ್ಲೇ ನಗರಸಭೆಯು ಕೆಯುಡಬ್ಲ್ಯೂಎಸ್ಗೆ ವಹಿಸಲಿದೆ ಎಂದು ತಿಳಿಸಿದರು.
ರು. 174.7 ಕೋಟಿ ಯೋಜನೆ: ಮಂಗಳವಾರ ಯೋಜನೆ ಕುರಿತಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಸಕರು, 174.7 ಕೋಟಿ ರುಪಾಯಿ ಅಂದಾಜು ವೆಚ್ಚದ ಈ ಯೋಜನೆ ಕಾಮಗಾರಿ ಮೂರು ವರ್ಷಗಳಲ್ಲಿ ನಗರದ ಎಲ್ಲಾ ವಾರ್ಡ್ಗಳಲ್ಲೂ ಅನುಷ್ಠಾನಗೊಳ್ಳಲಿದ್ದು, ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ ಎಂದರು.
ಪ್ರತ್ಯೇಕ ಪೈಪ್ಲೈನ್: ಈ ಯೋಜನೆಗಾಗಿ ಹಾಲಿ ಇರುವ ನೀರಿನ ಪೈಪ್ಲೈನ್ ಬದಲಿಗೆ ಪ್ರತ್ಯೇಕ ಪೈಪ್ಲೈನ್ ಅಳವಡಿಸಲಾಗುತ್ತದೆ. ಪ್ರತ್ಯೇಕವಾಗಿ ವಿತರಣಾ ಜಾಲವನ್ನು ಅಳವಡಿಸುವುದಕ್ಕಾಗಿ 130.7 ಕೋಟಿ ರುಪಾಯಿ ವೆಚ್ಚದ ಅಂದಾಜಿದೆ. ಇದರಲ್ಲಿ ಹೊಸ ಕೊಳವೆ ಮಾರ್ಗ ಅಳವಡಿಸುವ ಜೊತೆಗೆ ನಗರದಲ್ಲಿ ಪ್ರಸ್ತುತ ಇರುವ ಎಲ್ಲಾ 75673 ಕಟ್ಟಡಗಳಿಗೆ ಮೀಟರ್ ಅಳವಡಿಸಿ ನೀರಿನ ಸಂಪರ್ಕ ನೀಡುವುದು ಸೇರಿದೆ.
10 ಮೀಟರ್ ಎತ್ತರದಲ್ಲಿನ (3 ಅಂತಸ್ತು) ಟ್ಯಾಂಕ್ಗೂ ನೇರವಾಗಿ ನೀರು ತುಂಬಲಿದ್ದು, ಆ ಮೂಲಕ ವಿದ್ಯುತ್ ಕೂಡ ಉಳಿತಾಯವಾಗಲಿದೆ. ಈ ಯೋಜನೆಯಡಿ ಗಾಜನೂರಿನಿಂದ 10.5 ಕಿ.ಮೀ. ಉದ್ದದ ಎಂ.ಎಸ್.ಪೈಪ್ಲೈನ್ ಮತ್ತು ನಗರದಲ್ಲಿ ವಿತರಣಾ ಜಾಲಕ್ಕಾಗಿ 631 ಕಿ.ಮೀ. ಹೈ ಡೆನ್ಸಿಟಿ ಪೈಪ್ಲೈನ್ಎಚ್ಡಿಪಿ ಅಳವಡಿಸಲಾಗುವುದು.
ತೀರ್ಥಹಳ್ಳಿ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳಲಿದ್ದು, ಈ ಸಂಬಂಧವೂ ಪ್ರಕ್ರಿಯೆ ನಡೆದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾವಿತ ಚತುಷ್ಪತ ರಸ್ತೆ ಅಂಚಿನಲ್ಲಿಯೇ ಹೊಸಮಾರ್ಗ ಅಳವಡಿಸಲಾಗುವುದು. ಮುಂದಿನ 50 ವರ್ಷಗಳ ಬೇಡಿಕೆಗೆ ಅನುಗುಣವಾಗಿ ಇದನ್ನು ಅಳವಡಿಸಲಾಗುತ್ತದೆ.
104 ಎಂಎಲ್ಡಿ ನೀರು: ಸದ್ಯ ಹಾಲಿ ಇರುವ ಲೈನ್ನಲ್ಲಿ 84 ಎಂಎಲ್ಡಿ ನೀರು ಕೆಆರ್ವಾಟರ್ ವರ್ಕ್ಸ್ಗೆ ಬರುತ್ತಿದೆ. ನೀರು ಸೋರಿಕೆ ತಡೆಗಟ್ಟಿದಲ್ಲಿ 104 ಎಂಎಲ್ಡಿ ನೀರು ತರಲು ಅವಕಾಶವಿದೆ. ಇಷ್ಟು ನೀರು 2026ರವರೆಗಿನ ಬೇಡಿಕೆಯನ್ನೂ ಪೂರೈಸಲಿದೆ ಎಂದು ಕೆಯುಡಬ್ಲ್ಯೂಎಸ್ ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್ ತಿಳಿಸಿದರು.
ಸಭೆಯಲ್ಲಿ ಕೆಯುಡಬ್ಲ್ಯೂಎಸ್ ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್ ಅವರೊಂದಿಗೆ ನಗರಸಭೆ ಎಇಇ ಗಣೇಶ್, ಮತ್ತಿತರ ಅಧಿಕಾರಿಗಳು ಇದ್ದರು.
ಸಭೆಯ ಮುಖ್ಯಾಂಶಗಳು
- ಖಾಸಗಿ ಬಸ್ ನಿಲ್ದಾಣ, ಮಿಳಘಟ್ಟ ಮೂಲಕ ಗೋಪಾಳಕ್ಕೆ ಸಾಗುವ ರಸ್ತೆ ಅಗಲೀಕರಣ
- ಮೈಕ್ರೋವೇವ್ ಸ್ಟೇಷನ್ ಎದುರಿನ ಚತುಷ್ಪಥ ರಸ್ತೆ ವಿಸ್ತರಣೆ
- ನಗರದಲ್ಲಿ ಇದೂವರೆಗೂ ಡಾಂಬರೀಕರಣ ಆಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ
- ಸಾಗರ ರಸ್ತೆಯಲ್ಲಿ 5 ಅಡಿ ಸೈಕಲ್ ಪಥ
- ಹೊರವಲಯದಲ್ಲಿ ಕುಡಿವ ನೀರು ನೀಡುವುದಕ್ಕೆ ಆದ್ಯತೆ
- ಸೂಳೆಬೈಲು, ಮಲವಗೊಪ್ಪ, ನವುಲೆ ಸೇರಿದಂತೆ ಹೊರವಲಯದಲ್ಲಿ ಒಳಚರಂಡಿ
- ಆಲ್ಕೊಳ ವೃತ್ತ, ಸರ್ಕ್ಯೂಟ್ ಹೌಸ್ ವೃತ್ತ, ಮಂಡ್ಲಿ ಜಂಕ್ಷನ್, ಸಂದೇಶ್ ಮೋಟಾರ್ಸ್ ಎದುರಿನ ವೃತ್ತ, ಮಹಾವೀರ ವೃತ್ತ, ರೇಲ್ವೆ ಮೇಲುಸೇತುವೆ ನಂತರ ಶಾಂತಿನಗರ ಬದಿಯಲ್ಲಿ ರೋಟರಿ ಜಂಕ್ಷನ್ ಅಭಿವೃದ್ಧಿ
- ಪಾರ್ಕ್ ಬಡಾವಣೆಯಲ್ಲಿ ಟ್ಯಾಕ್ಸಿಗಳ ನಿಲುಗಡೆ ತಾಣ, ಸಣ್ಣ ವ್ಯಾಪಾರಿಗಳಿಗೆ ಅವಕಾಶ.
-ನಗರದ ವಿವಿಧೆಡೆ ವಲಯ ಕಚೇರಿ ನಿರ್ಮಾಣ
- ಜೈಲು ಸ್ಥಳಾಂತರದ ನಂತರ ಈ ಜಾಗ ಖಾಲಿ ಉಳಿಸಿ ಅಭಿವೃದ್ಧಿಪಡಿಸಲು 1 ಕೋಟಿ ಮೀಸಲು
- ಬಸ್ ನಿಲ್ದಾಣದ ಹಿಂಭಾಗದ ನಗರಸಭೆ ಜಾಗದಲ್ಲಿ ಕೈಗಾರಿಕಾ ವಸ್ತು ಪ್ರದರ್ಶಕ್ಕೆ ಶಾಶ್ವತ ವ್ಯವಸ್ಥೆ.
- ಹಾಲಿ ಶಿವಪ್ಪನಾಯಕ ವೃತ್ತದ ಬಳಿ ಇರುವ ಹಣ್ಣು, ತರಕಾರಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿದ ಗಾರ್ಡನ್ ಏರಿಯಾದ ನಗರಸಭೆ ಜಾಗಕ್ಕೆ ಸ್ಥಳಾಂತರ.
--