ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಅಗತ್ಯ: ಲಕ್ಷ್ಮಿದೇವಿ
ಹಿರಿಯೂರು: ಶೈಕ್ಷಣಿಕ ರಂಗದ ಅಭಿವೃದ್ಧಿಗೆ ಶಿಕ್ಷಕರು,ಪೋಷಕರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಒಂದಾಗಿ ಶ್ರಮಿಸಬೇಕು ಎಂದು ತಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಿ ಹೇಳಿದರು. ತಾಲೂಕಿನ ರಂಗೇಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾವಂತರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದಲ್ಲಿ ಎಲ್ಲರ ಶ್ರಮ ಮತ್ತು ಸಹಕಾರದ ಅಗತ್ಯವಿದೆಯೆಂದು ಹೇಳಿದರು.
ಮಕ್ಕಳನ್ನು ಶಾಲೆಗೆ ಕಳುಹಿಸಿ ಪೋಷಕರು ತಮ್ಮ ಜವಾಬ್ದಾರಿಯನ್ನು ಕಳೆದು ಕೊಂಡರೆ ಸಾಲದು, ಮಕ್ಕಳ ಓದು, ಮತ್ತಿತರ ಆಸಕ್ತಿಗಳ ಕುರಿತು ಕಾಳಜಿ ವಹಿಸುವ ಅಗತ್ಯವಿದೆ. ಶಾಲೆಯ ಸಿಬ್ಬಂದಿಯ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಬೆಳವಣಿಗೆಯನ್ನು ಗಮನಿಸುವ ಕೆಲಸ ಮಾಡಬೇಕು ಎಂದರು.
ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸೂಕ್ತ ವೇದಿಕೆಯನ್ನು ಒದಗಿಸುತ್ತವೆಯೆಂದು ಹೇಳಿದರು.
ಗ್ರಾಮದ ಮುಖಂಡ ರಾಮಕೃಷ್ಣ ಹೆಗಡೆ ಮಾತನಾಡಿ, ಮಕ್ಕಳಲ್ಲಿನ ಪಠ್ಯದ ಆಸಕ್ತಿಯ ಜೊತೆಗೆ ಉಳಿದ ಕಲೆ, ಕ್ರೀಡೆಗಳ ಒಲವನ್ನು ಗುರುತಿಸಲು ವಿಶೇಷ ಕಾರ್ಯಕ್ರಮಗಳ ಅಗತ್ಯವಿದೆ ಎಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್. ತಿಪ್ಪೇಸ್ವಾಮಿ ಮಾತನಾಡಿದರು.
ಸಿಆರ್‌ಪಿ ಹೇಮಗಿರಿ, ಎಸ್‌ಡಿಎಂಸಿ ಅಧ್ಯಕ್ಷ ಡಿ.ಎಸ್. ರವಿಕುಮಾರ್, ಮುಖ್ಯೋಪಾಧ್ಯಾಯ ಬಿ.ಎಚ್. ಬಸವರಾಜ್, ಶಿಕ್ಷಕರಾದ ಲೋಕೇಶ್, ನಟರಾಜ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.