ಸಮಾಜ ನಿರ್ಮಾಣದಲ್ಲಿ ಮಠಾಧೀಶರ ಪಾತ್ರ ಹಿರಿದು: ತಿಪ್ಪೇಸ್ವಾಮಿ
ಕ.ಪ್ರ.ವಾರ್ತೆ ಮೊಳಕಾಲ್ಮುರು ಡಿ.10
12ನೇ ಶತಮಾನದ ಬಸವಣ್ಣ ಅವರು ಶೋಷಿತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ಸಮಾಜ ಸುಧಾರಕ ಎಂದು ಶಾಸಕ ಎಸ್. ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಚಿಕ್ಕುಂತಿ ಗ್ರಾಮದಲ್ಲಿ ನಡೆದ ಬೋರೇಶ ಗುರೂಜಿ ಅವರ 101ನೇ ಜನ್ಮ ದಿನಾಚರಣೆ, ಶಿವಾನುಭವ ಗೋಷ್ಠಿ, ಗುರುದೀಕ್ಷೆ ತ್ರಿವಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತೀಯತೆ ತಾಂಡವ ಆಡುತ್ತಿದ್ದ ಕಾಲದಲ್ಲಿ ಬಸವಣ್ಣ ಅವರು ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ದುಡಿದರು. ತಮ್ಮದೇ ಆದ ಧಾರ್ಮಿಕ ಆಚರಣೆಗಳಿಗೆ ಒತ್ತು ನೀಡಿ ಸಮಾಜಮುಖಿ ಯಾಗಿ ಕೆಲಸ ಮಾಡಿದವರು ಎಂದರು.
ಬಸವಣ್ಣ ಅವರ ಆದರ್ಶಗಳನ್ನು ಇಂದು ಪಾಲಿಸಬೇಕಾದ ಅಗತ್ಯವಿದೆ. ಕಲುಷಿತ ಸಮಾಜದಲ್ಲಿ ಎಲೆ ಮರೆಕಾಯಿಯಂತೆ ಸಾರ್ವಜನಿಕರಿಗೆ ಉತ್ತಮ ಧಾರ್ಮಿಕ ಸಂದೇಶಗಳನ್ನು ನೀಡುವ ಮುಖೇನ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಠಾಧೀಶರ ಪಾತ್ರ ಅಪಾರವಾದುದು. ಅದರಂತೆ ಹಿಂದುಳಿದ ತಾಲೂಕಿನ ಚಿಕ್ಕುಂತಿ ಮಠದ ಸ್ವಾಮೀಜಿಯೂ ಕೂಡ ಈ ಭಾಗದಲ್ಲಿ ಜನತೆಗೆ ಧಾರ್ಮಿಕ ಸಂದೇಶಗಳನ್ನು ಸಾರುವುದರಲ್ಲಿ ಇವರು ಒಬ್ಬರಾಗಿದ್ದಾರೆ. ಮಠದಲ್ಲಿ ಸಭಾ ಭವನ ನಿರ್ಮಾಣ ಮಾಡಲು 5 ಲಕ್ಷ ನೀಡುವ ಭರವಸೆ ನೀಡಿದರು.
ಸಿದ್ದಯ್ಯನಕೋಟೆಯ ಬಸವಲಿಂಗ ಸ್ವಾಮೀಜಿ ಮಾತನಾಡಿ, ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಜನತೆ ಹಲವು ರೀತಿಯಲ್ಲಿ ಸಂಕಷ್ಟ ಅನುಭವಿಸುವಂತಾಗಿದೆ. ಹಾಗಾಗಿ, ಜನತೆ ನಿಮ್ಮ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸಿ ಹೆಚ್ಚಾಗಿ ನಿಮ್ಮ ಮನೆಗಳ ಮುಂದೆ ಹೊಲಗಳಲ್ಲಿ ಮರ-ಗಿಡಗಳನ್ನು ಬೆಳೆಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಬರ ಹೋಗಲಾಡಿಸಬಹುದು ಎಂದು ತಿಳಿಸಿದರು.
ಜಿಪಂ ಸದಸ್ಯೆ ಮಾರಕ್ಕ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಬದಲಾವಣೆ ಮಾಡುತ್ತಿರುವ ಇಲ್ಲಿನ ಮಠದ ಅಭಿವೃದ್ಧಿಗೆ 3 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಕ್ಕುಂತಿ ಮಠದ ಉತ್ತರಾಧಿಕಾರಿ ಶಿವಮೂರ್ತಿ ಸ್ವಾಮೀಜಿ, ತುಕೂರ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ತಿಪ್ಪೀರಮ್ಮ, ಮುಖಂಡರಾದ ಡಿ.ಒ. ಮೊರಾರ್ಜಿ, ಕರಿಬಸಪ್ಪ, ಬಿ.ಮಂಜುನಾಥ್, ಬೋರಯ್ಯ, ಸಣ್ಣ ಮಲ್ಲಯ್ಯ, ಡಿ.ಬೋರಯ್ಯ, ದಾಸರ ಓಬಯ್ಯ, ಭೂಶಕ್ತಿ ವೇದಿಕೆಯ ಪ್ರಕಾಶ ಮೂದಲಾದವರಿದ್ದರು.