ಸುದ್ದಿ ಸಂಕ್ಷೇಪ
ಬೇಡಿಕೆ ಈಡೇರಿಕೆ ಒತ್ತಾಯಿಸಿ ಮನವಿ
ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ ಶಿಕ್ಷಣ ಸಚಿವ ಕಿಮ್ಮನೆ ರತ್ನಾರ ಅವರಿಗೆ ಮನವಿ ಸಲ್ಲಿಸಿತು. ರಾಜ್ಯ ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಐಟಿಐ, ಡಿಪ್ಲೊಮಾ, ಡಿಇಡಿ, ಬಿಇಡಿ, ಕಾನೂನು ಕಾಲೇಜು ಹಾಗೂ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು- ಶಿಕ್ಷಕೇತರ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಗಳಿಗೆ ಸರ್ಕಾರದಿಂದ ಸಿಗಬಹುದಾದ ಅನೇಕ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಸಂಘ ಆರೋಪಿಸಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸಿಗುತ್ತಿರುವ ಸೌಲಭ್ಯಗಳು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಅತ್ಯವಶ್ಯಕವಾದ ಸೌಲಭ್ಯಗಳೂ ದೊರೆಯುತ್ತಿಲ್ಲ. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಸರ್ಕಾರ ನೀಡುತ್ತಿರುವ ಸವಲತ್ತುಗಳಲ್ಲಿ ತಾರತಮ್ಯವಿದ್ದು, ಸರ್ಕಾರಿ ನೌಕರರಿಗೆ ಸಿಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ವಿಸ್ತರಿಸಬೇಕೆಂದು ಸಂಘ ಆಗ್ರಹಿಸಿದೆ. ಈ ವೇಳೆ ಸಂಘದ ಗೌರವಾಧ್ಯಕ್ಷ ಡಾ. ಬಾಲಕೃಷ್ಣ ಹೆಗಡೆ, ಅಧ್ಯಕ್ಷ ಡಾ. ಕೆ.ಎಚ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಎಲ್. ಶಿವಕುಮಾರ ಮತ್ತಿತರರು ಇದ್ದರು.
'ಪ್ರಾದೇಶಿಕ ಆಹಾರ ಪದ್ಧತಿ ಜಾರಿಯಾಗಲಿ'
ತೀರ್ಥಹಳ್ಳಿ: ವಿದ್ಯಾರ್ಥಿಗಳ ಪೌಷ್ಟಿಕತೆ ದೃಷ್ಟಿಯಿಂದ ಶಾಲೆಗಳಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿ ಊಟ ಯೋಜನೆಯಲ್ಲಿ ಸ್ಥಳೀಯ ಪ್ರಾದೇಶಿಕ ಆಹಾರ ಪದ್ಧತಿಯನ್ನು ಜಾರಿಗೆ ತರುವುದು ಸೂಕ್ತ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಶ್ರೀಕಂಠ ಕೂಡಿಗೆ ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಉಬ್ಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು, ಪ್ರಾದೇಶಿಕ ಮಟ್ಟದಲ್ಲಿ ಸ್ಥಳೀಯ ಹವಾಗುಣಕ್ಕೆ ಹೊಂದುವಂತಹ ಆಹಾರ ಪದ್ಧತಿ ನಮ್ಮ ಬದುಕಿನಲ್ಲಿ ಜಾರಿಯಲ್ಲಿದೆ. ಆದರೆ, ಸರ್ಕಾರದ ಬಿಸಿಯೂಟ ಯೋಜನೆ ಎಲ್ಲಾ ಪ್ರದೇಶಗಳಿಗೂ ಒಂದೇ ರೀತಿಯ ಆಹಾರ ವಿತರಣೆ ಮಾಡುತ್ತಿದ್ದಾರೆ. ಬದಲಾಗಿ ಆಯಾ ಸ್ಥಳೀಯ ದೇಸೀ ಆಹಾರ ಬಿಸಿಯೂಟ ಯೋಜನೆಯಲ್ಲಿ ಅಳವಡಿಸುವುದರಿಂದ ಶಾಲಾ ಮಕ್ಕಳು ಆಹಾರವನ್ನು ನೆಮ್ಮದಿಯಿಂದ ಸವಿಯುತ್ತಾರೆ ಎಂದರು. ಇದೇ ಸಂದರ್ಭದಲ್ಲಿ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ, ವಿವಿಧ ದೇಶಗಳ ನಾಣ್ಯ -ನೋಟುಗಳ ಪ್ರದರ್ಶನ, ನಾಟಕ, ಏಕಾಂಕ, ಜಾನಪದ ಗೀತ ಗಾಯನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಮಂಜುನಾಥ ಗೌಡ, ಕಲಾವಿದ ಯು.ಎಸ್. ರಾಮಣ್ಣ, ಯು.ಎಸ್. ನಾರಾಯಣಗೌಡ, ಮಾನಪ್ಪಗೌಡ, ನಿವೃತ್ತ ಶಿಕ್ಷಕ ಮೂಡ್ಲು ಡಾಕಪ್ಪಗೌಡ, ಶಿಕ್ಷಕ ವಿ.ಟಿ. ನೇತಾಜಿ ಮತ್ತಿತರರು ಇದ್ದರು. ಮುಖ್ಯ ಶಿಕ್ಷಕ ಹರೀಶ್ ಸ್ವಾಗತಿಸಿದರು. ದುರ್ಗಪ್ಪ ಪ್ರಾಸ್ತಾವಿಕ ಭಾಷಣ ಮಾಡಿದರು.