ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೋಳ, ಬತ್ತ ಖರೀದಿ ಕೇಂದ್ರ ಖಾಲಿ ಖಾಲಿ...!

Lingaraj Badiger
Updated On : 12 Dec 2013, 10:50 am

ಕ.ಪ್ರ.ವಾರ್ತೆ  ಶಿವಮೊಗ್ಗ  ಡಿ.11: ಸರ್ಕಾರವೇನೋ ರೈತರ ನೆರವಿಗೆ ಬರಬೇಕು ಎಂಬ ಉದ್ದೇಶದಿಂದ ಜೋಳ ಹಾಗೂ ಬತ್ತಕ್ಕೆ ಬೆಂಬಲ ಬೆಲೆ ಘೋಷಿಸಿತು. ಹಾಗೆಯೇ ಒಂದಷ್ಟು ಕಠಿಣ ನಿಯಮಗಳನ್ನೂ ಜಾರಿಗೆ ತಂದಿತು. ಆದರೆ, ಬೆಂಬಲ ಬೆಲೆ ಸದುಪಯೋಗ ಪಡೆದುಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಹೀಗಾಗಿ ಬೆಂಬಲ ಬೆಲೆ ಕೇಂದ್ರದಿಂದ ರೈತರು ಸಂಪೂರ್ಣವಾಗಿ ದೂರ ಉಳಿದಿದ್ದಾರೆ.
ನ. 25 ರಂದೇ ಶಿವಮೊಗ್ಗದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾದರೂ, ಈವರೆಗೆ ಮೂವರು ರೈತರು ಮಾತ್ರ ಇಲ್ಲಿಗೆ ಎಡತಾಕಿದ್ದಾರೆ. ಬೆಂಬಲ ಬೆಲೆ ಕೇಂದ್ರದ ಕೇಳಿಬಂದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕನ್ನಡಪ್ರಭ ಎರಡು ದಿನಗಳ ಕಾಲ ರಿಯಾಲಿಟಿ ಚೆಕ್ ನಡೆಸಿದ್ದು, ಬೆಂಬಲ ಬೆಲೆ ಕೇಂದ್ರ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದು, ರೈತರೇ ನಿರಾಸಕ್ತಿ ತೋರಿಸುತ್ತಿರುವುದು ಕಂಡುಬಂದಿದೆ.
ವ್ಯವಸ್ಥೆ ಅಚ್ಚುಕಟ್ಟು: ಶಿವಮೊಗ್ಗದ ಎಪಿಎಂಸಿ ಪ್ರಾಂಗಣದಲ್ಲಿ ಬೆಂಬಲ ಬೆಲೆಯಡಿಯಲ್ಲಿ ಬತ್ತ ಹಾಗೂ ಜೋಳವನ್ನು ಖರೀದಿಸುವ ಕೇಂದ್ರ ಆರಂಭಿಸಲಾಗಿದೆ. ಅದೇ ರೀತಿ ಭದ್ರಾವತಿ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಆನವಟ್ಟಿ, ರಿಪ್ಪನ್ ಪೇಟೆ, ಸಾಗರ, ಆನಂದಪುರ, ತೀರ್ಥಹಳ್ಳಿ, ಹೊಸನಗರದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಕ್ವಿಂಟಲ್ ಮೆಕ್ಕೆ ಜೋಳಕ್ಕೆ ರು. 1,310 ರುಪಾಯಿ ಹಾಗೂ ಬತ್ತಕ್ಕೆ ರು. 1,600 ಪಾಯಿ ನೀಡುವುದೆಂದು ನಿಶ್ಚಯಿಸಲಾಗಿದೆ.
ಶಿವಮೊಗ್ಗ ಕೇಂದ್ರದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗಳಿವೆ. ಸೌಜನ್ಯಯುತವಾಗಿ ರೈತರನ್ನು ಬರಮಾಡಿಕೊಳ್ಳಲು ಉಗ್ರಾಣ ನಿಗಮದ ಅಧಿಕಾರಿ, ಸಿಬ್ಬಂದಿಗಳಿದ್ದಾರೆ. ಮಾಹಿತಿ ಅರಸಿ ಬರುವ ರೈತರಿಗೆ ಅಲ್ಲಿ ಸಾವಧಾನವಾಗಿ ವಿವರಣೆ ನೀಡಿ ಕಳುಹಿಸಿಕೊಡಲಾಗುತ್ತಿದೆ.
ಸರ್ಕಾರದ ನಿಯಮ: ಆದರೆ, ಸರ್ಕಾರ ಹೊಸದಾಗಿ ರೂಪಿಸಿದ ನಿಯಮಗಳು ರೈತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
  ಅಧಿಕಾರಿಗಳು ಎಷ್ಟೇ ಮನವರಿಕೆ ಮಾಡಿಕೊಡಲು ಮುಂದಾದರೂ, ನಿಯಮ ಪೂರೈಸಲು ತಮ್ಮಿಂದ ಸಾಧ್ಯವೇ  ಎಂಬ ಪ್ರಶ್ನೆಯೊಂದಿಗೆ ಕೇಂದ್ರದಿಂದ ಮರಳುತ್ತಿದ್ದಾರೆ.
ಸದ್ಯ ಈ ಕೇಂದ್ರಕ್ಕೆ ಸೋಮವಾರದವರೆಗೆ ಹಲವು ರೈತರು ಬಂದು ಮಾಹಿತಿ ಕೇಳಿಕೊಂಡು ಹೋಗಿದ್ದಾರೆ. ಮತ್ತೆ ಕೆಲವರು ಸ್ಯಾಂಪಲ್ ತಂದು ತೋರಿಸಿ ಹೋಗಿದ್ದಾರೆ. ಆದರೆ, ಬೆಂಬಲ ಬೆಲೆಗೆ ಮಾರಾಟ ಮಾಡಿರುವವರು ಮೂವರೇ ರೈತರು. ಒಟ್ಟು ಖರೀದಿಯಾಗಿರುವುದು 200 ಕ್ವಿಂಟಲ್‌ಗಿಂತ ಕಡಿಮೆ.  
ಹಿನ್ನಡೆ: ತಹಸೀಲ್ದಾರ್ ಅಥವಾ ಉಪ ತಹಸೀಲ್ದಾರ್ ಅವರಿಂದ ದೃಢೀಕೃತ ಹೊಂದಿದ ಪಹಣಿಯನ್ನು ರೈತರು ಮಾರಾಟ ಸಂದರ್ಭದಲ್ಲಿ ತರಬೇಕಾಗುತ್ತದೆ.
 ಅದೇ ರೀತಿ ರೈತರ ಹೆಸರು ಮತ್ತು ಬೆಳೆದ ಉತ್ಪನ್ನದ ಹೆಸರು ಮತ್ತು ಪ್ರಮಾಣವನ್ನು ನಮೂದಿಸಿದ ಕೂಪನ್‌ಗಳನ್ನು ತಹಸೀಲ್ದಾರ್, ಉಪ ತಹಸೀಲ್ದಾರ್ ಅಥವಾ ಕಂದಾಯಾಧಿಕಾರಿಯಿಂದ ದೃಢೀಕರಿಸಿ ತರಬೇಕು.
ಕಂದಾಯಾಧಿಕಾರಿಗಳಿಂದ ಬೆಳೆ ದೃಢೀಕರಣ ಪತ್ರ, ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕದ ಛಾಯಾಪ್ರತಿ, ರದ್ದುಪಡಿಸಿದ ಒಂದು ಚೆಕ್ ಲೀಫ್‌ನ್ನು ತರುವುದು ಕಡ್ಡಾಯ.
ರೈತರು ಆರಂಭದಲ್ಲಿ ತಾವು ಬೆಳೆದ ಜೋಳ- ಬತ್ತದ ಸ್ಯಾಂಪಲನ್ನು ಖರೀದಿ ಕೇಂದ್ರಕ್ಕೆ ತಂದು ಗ್ರೇಡಿಂಗ್ ಮಾಡಿಸಿಕೊಳ್ಳಬೇಕು. ಸರ್ಕಾರ ನೇಮಿಸಿದ ಗ್ರೇಡರ್‌ಗಳು ಸ್ಯಾಂಪಲ್‌ನ ಅರ್ಹತೆಯನ್ನು ಪರೀಕ್ಷಿಸಿ ಖರೀದಿಗೆ ಸೂಕ್ತವಿದೆಯೇ ಎಂಬುದನ್ನು ಪರಿಶೀಲಿಸಿ ನಿರ್ಧರಿಸುತ್ತಾರೆ. ಒಂದು ವೇಳೆ ಇಲ್ಲಿ ರೈತರು ಪಾಸ್ ಆದರೂ ಸಹ ನಂತರದ ಹಂತದಲ್ಲಿ ದೃಢೀಕರಣ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ.
ಉತ್ತಮ ಉದ್ದೇಶ: ಈ ಪದ್ಧತಿಗಳು ಇಲ್ಲವಾದಲ್ಲಿ ರೈತರಿಂದ ಕಡಿಮೆ ದರದಲ್ಲಿ ಮಾಲು ಖರೀದಿಸುವ ದಲ್ಲಾಳಿಗಳು ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಉತ್ತಮ ಉದ್ದೇಶದಿಂದಷ್ಟೇ ದೃಢೀಕರಣ ಕಡ್ಡಾಯ ಮಾಡಲಾಗಿದೆ ಎಂಬುದು ಉಗ್ರಾಣ ನಿಗಮದ ಅಧಿಕಾರಿಗಳು ವಿವರಿಸುತ್ತಾರೆ.
ಹಿನ್ನಡೆಗೆ ಮತ್ತೊಂದು ಕಾರಣವೂ ಇದೆ. ದಲ್ಲಾಳಿಗಳು ರೈತನ ಜಮೀನಿನಿಂದಲೇ ಖರೀದಿ ನಡೆಸುತ್ತಾರೆ. ಹೀಗಾಗಿ ಸಾಗಾಟದ ಹೊರೆಯಿಂದ ತಪ್ಪಿಸಿಕೊಳ್ಳಲು ರೈತರು ರು. 100-200 ಕಡಿಮೆ ಬೆಲೆ ಸಿಕ್ಕರೂ ಅಲ್ಲೇ ಬೆಳೆ ಮಾರಾಟ ಮಾಡುತ್ತಿದ್ದಾರೆ.
 ಹಾಗೆಯೇ ದಲ್ಲಾಳಿಗಳು ಖರೀದಿ ಕೇಂದ್ರ ತಲುಪಲು ಇರುವ ಅಡೆತಡೆಗಳನ್ನು ರೈತರಿಗೆ ವಿವರಿಸುತ್ತಿದ್ದಾರೆ. ಇದೂ ಸಹ ಗಂಭೀರ ಪರಿಣಾಮಕ್ಕೆ ಕಾರಣವಾಗಿದೆ.
ದಲ್ಲಾಳಿ ವ್ಯಾಪಾರ ನಿರಂತರ: ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ರು. 1,200ರಂತೆ ಮಾರಾಟವಾಗುತ್ತಿದೆ. ಬೆಂಬಲ ಬೆಲೆ ರು. 1,310 ಇರುವುದರಿಂದಾಗಿ ರೈತರು 110 ರುಪಾಯಿ ಹೆಚ್ಚುವರಿ ಸಿಗುವುದಕ್ಕಿಂತ 1200 ರುಪಾಯಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಫಂಗಸ್‌ನಿಂದ ಕಳಾಹೀನವಾಗಿರುವ ಜೋಳವನ್ನು ಇನ್ನೂ ಕಡಿಮೆ ಬೆಲೆ ಕೊಡುತ್ತಿರುವ ಸಂಗತಿ ನಡೆದಿದೆ.
ಹೀಗಾಗಿ ಖರೀದಿ ಕೇಂದ್ರಕ್ಕೆ ಬರುತ್ತಿಲ್ಲ. ದೃಢೀಕರಣ ಮಾಡಿಸಿಕೊಳ್ಳುವ ಕಾರ್ಯಕ್ಕೆ ನೂರಾರು ರುಪಾಯಿ ಖರ್ಚಾಗುತ್ತದೆ. ಸಮಯವೂ ವ್ಯರ್ಥ. ಹೀಗಾಗಿ ಖಾಸಗಿ ಮಂಡಿಗಳಿಗೆ ಮೆಕ್ಕೆಜೋಳ ಮಾರಾಟ ಮಾಡಿದ್ದಾಗಿ ರೈತ ರಾಜೇಶ್ ಕಡಪ್ರಭಕ್ಕೆ ತಿಳಿಸಿದರು.
ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕ ರು. 1,100-1200 ರಂತೆ ಪ್ರತಿನಿತ್ಯ ರು. 4-5 ಸಾವಿರ ಕ್ವಿಂಟಲ್ ಮೆಕ್ಕೆಜೋಳ ಖರೀದಿಯಾಗುತ್ತಿದೆ.
- ಶ್ರೀಕಾಂತ್ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement