ನಿಧನಕ್ಕೆ ಸಂತಾಪ
ಶಿವಮೊಗ್ಗ: ಕೃಷಿ ತಜ್ಞ, ಕುವೆಂಪು ಅವರಿಂದ ಕೃಷಿ ಋಷಿ ಎಂದೇ ಕರೆಸಿಕೊಂಡಿದ್ದ ಡಾ. ಡಿ.ಆರ್. ಪ್ರಫುಲ್ಲಚಂದ್ರ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಸಂತಾಪ ಸೂಚಿಸಿದ್ದಾರೆ. ಪ್ರಫುಲ್ಲಚಂದ್ರ ಅವರು ರೈತರ ಆಸ್ತಿಯಂತಿದ್ದರು. ಅವರ ಆಗಲಿಕೆ ರೈತ ಸಮುದಾಯಕ್ಕೆ ದೊಡ್ಡ ನಷ್ಟ. ಕೃಷಿ ಇಂದು ನಶಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅವರು ನಮ್ಮ ನಡುವೆ ಇರಬೇಕಿತ್ತು ಎಂದು ಅವರು ಶೋಕಿಸಿದ್ದಾರೆ. ರೈತ ಸಂಘದ ಕಾರ್ಯಕರ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ರೈತ ಮುಖಂಡ ಕೆ.ಟಿ. ಗಂಗಾಧರ್, ಡಾ. ಡಿ.ಆರ್. ಪ್ರಫುಲ್ಲಚಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ರೈತರಿಗೆ ಅನುಕೂಲವಾಗುವ ಯಂತ್ರಗಳ ಅವಿಷ್ಕಾರದ ಮೂಲಕ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.
ಇಂದು ಹುಟ್ಟುಹಬ್ಬ
ಶಿವಮೊಗ್ಗ: ಅಖಿಲ ಕರ್ನಾಟಕ ರಜನಿಕಾಂತ್ ಅಭಿಮಾನಿಗಳ ಬಳಗ ಡಿ.12ರ ಬೆಳಗ್ಗೆ 10ಕ್ಕೆ ರಜನಿಕಾಂತ್ ಹುಟ್ಟುಹಬ್ಬದ ಅಂಗವಾಗಿ ನಗರದ ಶ್ರೀಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದೆ. ಕೇಂದ್ರಕ್ಕೆ 1 ದಿನದ ರೇಷನ್ ಸಾಮಾಗ್ರಿಗಳನ್ನು ನೀಡಿ ಮಕ್ಕಳಿಗೆ ಹಣ್ಣು, ಸಿಹಿ ಹಂಚಲಾಗುವುದು. ನಗರಸಭೆ ಸದಸ್ಯ ಎನ್. ಏಳುಮಲೈ ನೆರವೇರಿಸುವರು ಎಂದು ಬಳಗದ ಪ್ರಭಾಕರ್ ತಿಳಿಸಿದ್ದಾರೆ.
ತಪಾಸಣಾ ಶಿಬಿರ
ಶಿವಮೊಗ್ಗ: ಗುರು ಕಣ್ಣಿನ ಆಸ್ಪತ್ರೆಯಲ್ಲಿ ಡಿ.14ರಂದು ಬೆಳಗ್ಗೆ 8ಗಂಟೆಯಿಂದ ಉಚಿತ ತಲೆನೋವು ತಪಾಸಣೆ ಮತ್ತು ಸಲಹಾ ಶಿಬಿರ ಏರ್ಪಡಿಸಲಾಗಿದೆ. ಆಸಕ್ತರು ಒಂದು ದಿನ ಮೊದಲು ಹೆಸರು ನೋಂದಾಯಿಸಿ, ಟೋಕನ್ ಪಡೆಯುವಂತೆ ಆಸ್ಪತ್ರೆಯ ಡಾ. ಎಚ್.ವಿ. ಗಿರಿಸ್ವಾಮಿ ರಸ್ತಾಪುರಮಠ ತಿಳಿಸಿದ್ದಾರೆ. ವಿವರಗಳಿಗಾಗಿ-08182-270647.
ಅಡಕೆ ಬೆಳೆ ನಿಷೇಧಿಸುವ ಯತ್ನಕ್ಕೆ ಚೇತನರಾಜ್ ಖಂಡನೆ
ಸಾಗರ: ಅಡಕೆ ಬೆಳೆ ನಿಷೇಧಿಸಲು ಸುಪ್ರಿಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರದ ಕ್ರಮ ತಾಲೂಕು ಬಿಜೆಪಿ ಅಧ್ಯಕ್ಷ ಚೇತನರಾಜ್ ಬುಧವಾರ ಖಂಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಶೇ.50 ರಷ್ಟು ಕೃಷಿಕರು ಅಡಕೆಯನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ. ಅಡಕೆ ಸಂಸ್ಕೃತಿ ಪ್ರತೀಕ ಕೇಂದ್ರ ಸರ್ಕಾರ ತಂಬಾಕು, ಸಿಗರೇಟು ಕಂಪೆನಿಗಳ ಲಾಬಿಗೆ ಮಣಿದು ಆರೋಗ್ಯಕರವಾದ ಅಡಕೆಯನ್ನು ವಿಷಯುಕ್ತ ಆಹಾರಗಳ ಪಟ್ಟಿಗೆ ಸೇರಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಆದೇಶ ಹಿಂಪಡೆಯಲಿ: ಶಿರಸಿಯಲ್ಲಿ 50 ಕ್ಕೂ ಹೆಚ್ಚು ರೈತರ ಸಾಲ ವಸೂಲಿಗೆ ರಾಜ್ಯ ಸರ್ಕಾರದ ಸಹಕಾರಿ ಉಪನಿಬಂಧಕರು ಜಪ್ತಿ ಆದೇಶ ಹೊರಡಿಸಿರುವುದು ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯಾಗಿದೆ. ತಕ್ಷಣ ರೈತರ ಚರ-ಸ್ಥಿರ ಸ್ವತ್ತುಗಳ ಜಪ್ತಿ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಯು.ಹೆಚ್.ರಾಮಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸತೀಶ ಬಾಬು, ಬಿಜೆಪಿ ಪ್ರಧಾನಕಾರ್ಯದರ್ಶಿ ರವೀಶ್, ಸುನಿಲ್ ಹಾಜರಿದ್ದರು.