ವಲ್ಲಭಬಾಯಿ ಪಟೇಲ್ ಏಕತಾ ಪ್ರತಿಮೆ: ಲೋಹ ಸಂಗ್ರಹ ಅಭಿಯಾನಕ್ಕೆ ಚಾಲನೆ
ಶಿವಮೊಗ್ಗ: ಗುಜರಾತಿನಲ್ಲಿ ಸ್ಥಾಪನೆ ಆಗುವ ಸರ್ದಾರ್ ವಲ್ಲಭಬಾಯಿ ಪಟೇಲ್ ಏಕತಾ ಪ್ರತಿಮೆಗಾಗಿ ಲೋಹ ಸಂಗ್ರಹಿಸುವ ಅಭಿಯಾನಕ್ಕೆ ಬುಧವಾರ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ವಿಧ್ಯುಕ್ತ ಚಾಲನೆ ದೊರೆಯಿತು.
ಏಕತಾ ಪ್ರತಿಮೆ ನಿರ್ಮಾಣಕ್ಕಾಗಿ ಭಾರತದ 6.50 ಲಕ್ಷ ಹಳ್ಳಿಗಳ ರೈತರು ಸಹಭಾಗಿಗಳಾಗುವಂತೆ ಮಾಡುವ ಉದ್ದೇಶದಿಂದ, ರೈತರು ಬಳಸಿದ ಕಬ್ಬಿಣದ ಕೃಷಿ ಸಲಕರಣೆಗಳನ್ನು ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ರಾಜ್ಯದಲ್ಲೂ ಲೋಹ ಸಂಗ್ರಹ ಅಭಿಯಾನ ಡಿಸೆಂಬರ್ 15 ರಿಂದ 26ರ ವರೆಗೆ ನಡೆಯುವುದು.
ಈ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ, ಲೋಹ ಸಂಗ್ರಣಾ ಸಮಿತಿಯ ನೇತೃತ್ವ ವಹಿಸಿರುವ ಮುರುಗೇಶ್ ನಿರಾಣಿ, ಭಾರತ ಒಕ್ಕೂಟದ ಸ್ಫೂರ್ತಿ ಪ್ರತಿರೂಪವೇ ಆದ ವಲ್ಲಭಬಾಯಿ ಪಟೇಲ್ ಅವರ ನಿತ್ಯ ನಿರಂತರ ಸ್ಮರಣೆಯೇ ನಮಗೆಲ್ಲರಿಗೂ ಪ್ರೇರಣೆ. ಅವರ ಬದುಕು, ಕನಸು ಮತ್ತು ಸಾಕಾರದ ಸಾಕ್ಷಾತ್ ಸ್ವರೂಪದ ಏಕತಾ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮದಿಂದಲೂ ಸಾಂಕೇತಿಕವಾಗಿ ಲೋಹ ಹಾಗೂ ಮಣ್ಣು ಸಂಗ್ರಹಿಸಲಾಗುತ್ತದೆ ಎಂದರು.
ರಥಯಾತ್ರೆ: ಪ್ರತಿ ಗ್ರಾಪಂದಿಂದ 1 ಕೆಜಿ ಲೋಹ ತೆಗೆದುಕೊಳ್ಳಲಾಗುತ್ತದೆ. ನಂತರ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಂಗ್ರಹಿಸಿ ದೊಡ್ಡ ಸಮಾರಂಭ ನಡೆಸಿ ರಥದ ಯಾತ್ರೆ ಮಾದರಿಯಲ್ಲಿ ಗುಜರಾತ್‌ಗೆ ಕಳುಹಿಸಿಕೊಡಲಾಗುವುದು ಎಂದು ವಿವರಣೆ ನೀಡಿದರು.
ಇಷ್ಟೇ ಅಲ್ಲದೇ ಪ್ರತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಫೋಟೋ, ಸಹಿಯನ್ನು ಸಂಗ್ರಹಿಸಲಾಗುತ್ತಿದ್ದು, ಅದನ್ನು ಪ್ರತಿಮೆ ಬಳಿ ನಿರ್ಮಿಸಲಾಗುವ ಸಭಾಂಗಣದಲ್ಲಿ ಪ್ರದರ್ಶಿಸಲಾಗುತ್ತದೆ. ಡಿಸೆಂಬರ್ 15ರಂದು ಸರ್ದಾರ್ ಪಟೇಲರ ಪುಣ್ಯ ತಿಥಿಯ ದಿನವಾಗಿದ್ದು, ಅಂದು ದೇಶದ 565 ಕಡೆ ಜಿಲ್ಲಾ ಕೇಂದ್ರಗಳಲ್ಲಿ ಏಕತಾ ಓಟ ನಡೆಯುವುದು. ಇದೊಂದು ಗಿನ್ನಿಸ್ ದಾಖಲೆಯಾಗಲಿದೆ. ಶಾಲೆ- ಕಾಲೇಜುಗಳಲ್ಲಿ ಪಟೇಲ್ ಕುರಿತು ಭಾಷಣ, ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಲೋಹ, ಮಣ್ಣನ್ನು ಸಂಗ್ರಹಿಸುವ ಹೊಣೆ ರೈತ ಮೋರ್ಚಾ ವಹಿಸಿಕೊಂಡಿದೆ. ಎಲ್ಲಾ ತಯಾರಿ ನಡೆದಿದೆ ಎಂದರು.