ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ
ಶಿವಮೊಗ್ಗ: ನ್ಯಾ. ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ಜಾರಿಗೊಳಿಸುವಂತೆ ಹಿಂದಿನಿಂದಲೂ ಸಂಘಟನೆ ಸರ್ಕಾರಗಳನ್ನು ಒತ್ತಾಯಿಸುತ್ತಿದೆ. ಆದರೆ, ಯಾವುದೇ ಸರ್ಕಾರ ಸಮಿತಿಯ ಹೋರಾಟಕ್ಕೆ ಮನ್ನಣೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮಾದಿಗ ಸಮಾಜ ರಾಜಕೀಯವಾಗಿ ಸಂಘಟಿತಗೊಳ್ಳಬೇಕು ಎಂದು ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೇಶವಮೂರ್ತಿ ಕರೆ ನೀಡಿದರು.
ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬುಧವಾರ ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು, ಸಮಿತಿಯ ಹೋರಾಟಗಳನ್ನು ಪ್ರಸ್ತುತ ಹೊರಗಿನ ಶಕ್ತಿಗಳು ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಅದನ್ನು ಮೀರಿ ಚಳವಳಿಗಳನ್ನು ಕಟ್ಟಬೇಕಿದೆ. ಇದಕ್ಕೆ ಸಮುದಾಯದ ಎಲ್ಲಾ ನಾಗರಿಕರು ಸಹಕರಿಸಬೇಕು ಎಂದರು.
ನ್ಯಾ.ಸದಾಶಿವ ಆಯೋಗದ ಒಳಮೀಸಲಾತಿ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ 2012ರಲ್ಲಿ ಬೆಳಗಾವಿಯ ಸುವರ್ಣಸೌಧದ ಎದುರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ಮಾದಿಗ ಸಮುದಾಯದವರ ಮೇಲೆ ಪೋಲೀಸರು ಅಮಾನವೀಯವಾಗಿ ದೌರ್ಜನ್ಯ ನಡೆಸಿದ್ದಾರೆ.
ಈ ಮೂಲಕ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ ಸಮುದಾಯವನ್ನು ತಿರಸ್ಕರಿದೆ ಎಂದು ಅವರು ಆರೋಪಿಸಿದರು.
ಇಂದು ಚಳವಳಿಗಳು ಕಷ್ಟಕರವಾಗಿದ್ದು, ಪ್ರತಿ ಹಂತದಲ್ಲೂ ಚಳವಳಿಗಳನ್ನು ಸಂಘಟಿಸಲಾಗಿದೆ. ಚಳವಳಿಗೆ ಮಾರ್ಗದರ್ಶಕರ ಅವಶ್ಯಕತೆ ಇದೆ. ಹೋರಾಟ, ತ್ಯಾಗದಿಂದಲೇ ಇತಿಹಾಸ ಸೃಷ್ಟಿ ಸಾಧ್ಯ ಎಂಬುದನ್ನು ಹೋರಾಟಗಾರರು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಎಸ್. ಮಾರಪ್ಪ, ಪ್ರೊ. ಚಂದ್ರಶೇಖರ್, ಪ್ರೊ. ಕಟ್ಟಿಮನಿ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಭಾನುಪ್ರಸಾದ್, ಆದಿಜಾಂಬವ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಲಿಂಗಪ್ಪ, ಮುಖಂಡ ಕಂಬಣ್ಣನವರ್, ರಂಗನಾಥ್ ಮತ್ತಿತರರು ಇದ್ದರು.