ಆಯುರ್ವೇದತ್ತ ಜನರ ಗಮನ: ತಿಮ್ಮಭೋವಿ
ಕ.ಪ್ರ.ವಾರ್ತೆ, ಕಡೂರು, ಡಿ.12 ದೀರ್ಘ ಕಾಲದ ಕಾಯಿಲೆಗಳಿಗೆ ಆಯುರ್ವೇದ ಪದ್ಧತಿ ಶಾಶ್ವತ ಚಿಕಿತ್ಸೆ ಸಿಗುವ ಮೂಲಕ ಜನರು ಆಯುರ್ವೇದ ಚಿಕಿತ್ಸೆಯತ್ತ ಮುಖ ಮಾಡುತ್ತಿದ್ದಾರೆ ಎಂದು ತಾಲೂಕು ದಂಡಾಧಿಕಾರಿ ತಿಮ್ಮಾಭೋವಿ ಹೇಳಿದರು.
ಅವರು ಕಡೂರು ಪಟ್ಟಣದ ಲಯನ್ ಸಭಾಂಗಣದಲ್ಲಿ 6 ದಿನಗಳ ಕಾಲ ನಡೆಯಲಿರುವ ಜಿಲ್ಲಾ ಮಟ್ಟದ ಸಿ ಮತ್ತು ಡಿ ದರ್ಜೆ ನೌಕರರಿಗೆ ನೀಡಿದ ಆಯರ್ವೇದಿಕ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲೆಡೆಯೂ ಔಷಧಿ: ಜನರು ಇತ್ತೀಚಿನ ದಿನಗಳಲ್ಲಿ ಆಯುರ್ವೇದಿಕ್ ಮತ್ತು ಆಲೋಪತಿಯಂತಹ ಪದ್ಧತಿಗಳತ್ತ ಒಲವು ತೋರುತ್ತಾ ತಮ್ಮ ಆರೋಗ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲೆಡೆ ಇರುವ ಆಯುರ್ವೇದಿಕ್ ಆಯುಷ್ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ದೊರಕುವ ಮೂಲಕ ಗ್ರಾಮೀಣ ಜನರೂ ಕೂಡ ಆಯುರ್ವೇದಿಕ್ ಔಷಧಿ ಉಪಯೋಗಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಇದರಿಂದ ಶಾಶ್ವತ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬ ಹಿರಿಯರ ಹಿಂದಿನ ನಂಬಿಕೆಗೆ ಮತ್ತೆ ಜೀವ ಬಂದಂತಾಗಿದೆ. ತಾಲೂಕಿನ ಆಸ್ಪತ್ರೆ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತು ದೊರಕಿಸಿ ಕೊಡುವುದಾಗಿ ತಿಮ್ಮಭೋವಿ ಭರವಸೆ ನೀಡಿದರು.
ಉತ್ತಮ ಸೇವೆ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ ಬಿ. ರಾಜಣ್ಣ ಮಾತನಾಡಿ, ಆಯುಷ್ ಆಸ್ಪತ್ರೆಗಳು ಹಾಗೂ ಚಿಕಿತ್ಸಾಲಯಗಳಲ್ಲಿ ಸಿಗುವಂತಹ ಔಷಧಿ ಹಾಗೂ ಪರಿಕರಗಳಿಂದ ಇಂದು ಗ್ರಾಮೀಣ ಮಟ್ಟದಲ್ಲಿ ಉತ್ತಮ ಸೇವೆ ಕಾಪಾಡುವಲ್ಲಿ ವೈದ್ಯರು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಲೂಕು ಆಯುಷ್ ಅಧಿಕಾರಿ ಡಾ. ಮಲ್ಲೇಶ್ ದೊಡ್ಡಗೋಣಿ ಮಾತನಾಡಿ, ವೈದ್ಯರು ತಮ್ಮ ಆಸ್ಪತ್ರೆಗಳಲ್ಲಿ ಇಂತಹ ಶಿಬಿರಗಳಿಂದ ಶಿಬಿರಾರ್ಥಿಗಳು ಹೇಳಿಕೊಟ್ಟ ವಿಷಯಗಳನ್ನು ಸರಿಯಾಗಿ ಮನನ ಮಾಡಿಕೊಂಡು ತಮ್ಮ ತಮ್ಮ ಆಸ್ಪತ್ರೆಗಳಲ್ಲಿ ಹಾಗೂ ಚಿಕಿತ್ಸಾಲಯಗಳಲ್ಲಿ ಪಂಚ ಕರ್ಮದ ಬಗ್ಗೆ ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲರೂ ಆಯರ್ವೇದಿಕ್ ಪದ್ಧತಿಯನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಶ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಜಯಣ್ಣ ಮಾತನಾಡಿ, ಇಲಾಖಾ ಕಾರ್ಯಕ್ರಮಗಳ ಬಗ್ಗೆ, ಉತ್ತಮ ಆರೋಗ್ಯ ನಿರ್ವಹಣೆ ಹಾಗೂ ದುಶ್ಚಟಗಳಿಂದ ಆಗುವ ಪರಿಣಾಮಗಳ ಕುರಿತು ತಿಳಿಸಿದರು.
ಡಾ ತೇಜಸ್ವಿನಿ, ಡಾ. ಶೈಲೇಂದ್ರ, ಡಾ. ಶ್ರೀನಿವಾಸನಾಯಕ್, ಡಾ. ಹೇಮಂತ್, ಡಾ. ಪ್ರಶಾಂತ್, ಡಾ. ಕಿರಣ್, ಡಾ. ಕಿಶೋರ್, ಡಾ. ಪ್ರಶಾಂತ್, ಸಂಪನ್ಮೂಲ ವ್ಯಕ್ತಿ ಹುಸೇನ್ ಶರೀಫ್ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಡಾ. ತೇಜಸ್ವಿನಿ ಪ್ರಾರ್ಥಿಸಿದರು. ಡಾ ಮಲ್ಲೇಶ್ ದೊಡ್ಡಗೋಣಿ ಸ್ವಾಗತಿಸಿದರು. ಡಾ. ಶ್ರೀನಿವಾಸ ನಾಯ್ಕ ವಂದಿಸಿದರು.