ಎಸ್ಮಾ, ವಿಐಎಸ್ಎಲ್ ಖಾಸಗೀಕರಣಕ್ಕೆ ವಿರೋಧ
ಕ.ಪ್ರ. ವಾರ್ತೆ ಶಿವಮೊಗ್ಗ ಡಿ.12
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್ಮಾ ಕಾನೂನು ವಿರೋಧಿಸಿ ಹಾಗೂ ವಿಐಎಸ್ಎಲ್ ಖಾಸಗೀಕರಣ ಖಂಡಿಸಿ ಸಿಐಟಿಯು ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸೈನ್ಸ್ ಮೈದಾನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ತಲುಪಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಎಸ್ಮಾ ಕಾಯ್ದೆ ಜಾರಿಗೆ ತಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕ್ರಮ ಸರಿಯಲ್ಲ. ಇದು ದುಡಿಯುವ ವರ್ಗವನ್ನು ಕಡೆಗಣಿಸಿದಂತೆ ಎಂದು ಮುಖಂಡರು ಆರೋಪಿಸಿದರು.
ಪ್ರಸ್ತುತ ಸನ್ನಿವೇಶದಲ್ಲಿ ಹೋರಾಟ ನಡೆಸಿ ಬೇಡಿಕೆಗಳ ಬಗ್ಗೆ ಗಮನ ಸೆಳೆಯುವುದು ಅನಿವಾರ್ಯವಾಗಿದೆ. ಹೀಗಿರುವಾಗ ಎಸ್ಮಾದಂತಹ ಕಾನೂನು ಜಾರಿಗೆ ತಂದಿರುವುದು ಎಷ್ಟು ಸರಿ ಪ್ರಶ್ನಿಸಿದರು.
ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಯ ಖಾಸಗೀಕರಣಕ್ಕೆ ಹೊರಟಿರುವ ಕೇಂದ್ರ ಸರ್ಕಾರದ ಧೋರಣೆ ಸರಿಯಲ್ಲ. ಕೂಡಲೇ ತನ್ನ ನಿರ್ಧಾರ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು. ಅದೇ ರೀತಿ ಕನಿಷ್ಠ ವೇತನ 10 ಸಾವಿರಗಿಂತ ಕಡಿಮೆ ಇರಬಾರದು, ಸಾರ್ವತ್ರಿಕ, ಸಾಮಾಜಿಕ ಭದ್ರತೆಯ ಪದರದಡಿಯಲ್ಲಿ ಕಾರ್ಮಿಕರೆಲ್ಲರೂ ಬರುವಂತೆ ನೋಡಿಕೊಳ್ಳಬೇಕು, ದುಡಿಯುವ ಜನತೆಗೆ ಪಿಂಚಣಿಯನ್ನು ಖಾತ್ರಿಪಡಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಯಿತು. ಗುತ್ತಿಗೆ ಕಾರ್ಮಿಕರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಗಬೇಕು, ಕಾರ್ಮಿಕ ಕಾನೂನುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು, ಬೆಲೆ ಏರಿಕೆ ತಗ್ಗಿಸಲು ಹಾಗೂ ಉದ್ಯೋಗ ಸೃಷ್ಟಿಸಲು ನಿರ್ದಿಷ್ಟ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆತವನ್ನು ಕೂಡಲೇ ನಿಲ್ಲಿಸಬೇಕು, ಬೋನಸ್ ಹಾಗೂ ಭವಿಷ್ಯ ನಿಧಿಯ ಮೇಲಿರುವ ಎಲ್ಲಾ ಮಿತಿ ತೆಗೆದುಹಾಕಬೇಕೆಂದು ಆಗ್ರಹಿಸಿದರು.