ಯುವತಿಯರ ನಾಪತ್ತೆ ಪ್ರಕರಣ ಹೆಚ್ಚಳ: ಕ್ರಮಕ್ಕೆ ಆಗ್ರಹ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಡಿ.12
ಜಿಲ್ಲೆಯಲ್ಲಿ ಹೆಣ್ಣುಮಕ್ಕಳು ಕಾಣೆಯಾಗುತ್ತಿರುವ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಹಾಗೂ ಕಾಣೆಯಾದವರನ್ನು ಪತ್ತೆ ಹಚ್ಚಿ ಸೂಕ್ತ ರಕ್ಷಣೆ ನೀಡುವಂತೆ ಶಾಶ್ವತಿ ಮಹಿಳಾ ವೇದಿಕೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ ವೇದಿಕೆ ಸದಸ್ಯರು, ರಾಜ್ಯ ಹಾಗೂ ಜಿಲ್ಲೆಯಲ್ಲಿ ದಿನೇ ದಿನೇ ಹೆಣ್ಣುಮಕ್ಕಳು ಕಾಣೆಯಾಗುತ್ತಿದ್ದು, ಹೆಣ್ಣು ಮಾರಾಟ ಗೊಂಬೆಯಂತಾಗಿ ನಿರಂತರ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮನೆ ಕೆಲಸಕ್ಕೆ, ಶಿಕ್ಷಣಕ್ಕೆಂದು ಹೋದ ಮಹಿಳೆಯರನ್ನು ದುರುಪಯೋಪಯೋಗಪಡಿಸಿಕೊಳ್ಳುವ ಪ್ರಕರಣ ಹೆಚ್ಚಾಗುತ್ತಿವೆ. ಹೆಣ್ಣು ಮಕ್ಕಳನ್ನು ಕೇವಲ 5ರಿಂದ 10 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಇಷ್ಟೆಲ್ಲಾ ಆದರೂ ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ತಾಳಿರುವುದು ದುರದೃಷ್ಟಕರ ಎಂದು ಸಂಘಟನೆ ಅಧ್ಯಕ್ಷ ಶಾಂತಾ ಸುರೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳು: ಹೆಣ್ಣುಮಕ್ಕಳು ಕಾಣೆಯಾಗುತ್ತಿರುವ ಬೆಳವಣಿಗೆ ತಡೆಯೊಡ್ಡಬೇಕು, ಜಿಲ್ಲೆಯಲ್ಲಿ ಎರಡು ಸಾಂತ್ವನ ಕೇಂದ್ರ ತೆರೆಯಬೇಕು, ಸಂಬಂಧಪಟ್ಟ ಇಲಾಖೆಗಳು ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಬೇಕು, ಹೆಣ್ಣುಮಕ್ಕಳ ಮಾರಾಟ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಉದಾಸೀನ ತೋರಿದರೆ ಹೋರಾಟ ತೀವ್ರಗೊಳಿಸಲಾಗುವುದೆಂದು ವೇದಿಕೆ ಎಚ್ಚರಿಸಿದೆ. ಮನವಿ ನೀಡುವ ಸಂದರ್ಭದಲ್ಲಿ ಶಿವಲೀಲಾ, ಉಷಾ ನಾಯಕ್, ಲಲಿತಮ್ಮ, ನಂದಿನಿ, ಪ್ರೇಮ, ಜ್ಯೋತಿರಾಜ್, ಲಲಿತಮ್ಮ, ಭಾರತಿ ಮುರುಗೇಶ್ ಮತ್ತಿತರರು ಇದ್ದರು.