ಅವೈಜ್ಞಾನಿಕ ವರದಿ ವಿರೋಧಿಸಿ ಪ್ರತಿಭಟನೆ
ಭದ್ರಾವತಿ: ಸದಾಶಿವ ಆಯೋಗಕ್ಕೆ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳ ಶೈಕ್ಷಣಿಕ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಸರ್ಕಾರ ಆದೇಶಿಸಿದ್ದು, ಆದರೆ, ಆಯೋಗ ಅವೈಜ್ಞಾನಿಕ ವರದಿ ಸಲ್ಲಿಸಿದೆ ಎಂದು ಆರೋಪಿಸಿ ಭದ್ರಾವತಿ ತಾಲೂಕು ಭೋವಿ ಜನಾಂಗದ ಅಭಿವೃದ್ಧಿ ಸಂಘ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭೋವಿ ಜನಾಂಗಕ್ಕೆ ಸೇರಿದ ಶೇ.70ರಷ್ಟು ಜನ ಶಿಕ್ಷಣದಿಂದ ವಂಚಿತರಾಗಿದ್ದು, ಕೇವಲ ಶೇ.5ರಷ್ಟು ಪ್ರಮಾಣ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆದ ಜನರ ಸಮೀಕ್ಷೆ ಮಾಡಿ ಸರ್ಕಾರಕ್ಕೆ ತಪ್ಪು ವರದಿ ನೀಡಿರುವುದು ಸರಿಯಲ್ಲ.
ಭೋವಿ ಜನಾಂಗವು ಆದಿ ಕಾಲದಿಂದಲು ಕಲ್ಲು ಹೊಡೆದು ಜೀವನ ಸಾಗಿಸುತ್ತಿದ್ದು ಮಾನವನ ಮೂಲಭೂತ ಸೌಕರ್ಯಗಳಾದ ಭಾವಿ, ಕೆರೆ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಾ ಜೀವನ ಸಾಗಿಸಿಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮೂಲಸೌಕರ್ಯ ಕೊರತೆ ಮತ್ತು ಬಡತನದಿಂದ ಭೋವಿ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಕೆಲಸವಿಲ್ಲದೆ ಕುಲ ಕಸುಬು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಮತ್ತು ದೋಷಪೂರಿತವಾಗಿದ್ದು, ಸಮುದಾಯ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಇನ್ನು ಶೋಚನೀಯ ಸ್ಥಿತಿಯಲ್ಲಿರುವಾಗ ಈ ವರದಿ ಜಾರಿಗೊಳಿಸಿರುವುದು ಅವೈಜ್ಞಾನಿಕ ಹಾಗೂ ದೋಷಪೂರಿತವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವರದಿಯಿಂದ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಕೆಲವೇ ವರ್ಗಕ್ಕೆ ಸೀಮಿತವಾಗಿದೆ. ಆದ್ದರಿಂದ ಈ ವರದಿಯನ್ನು ಸರ್ಕಾರ ಕೂಡಲೇ ತಿರಸ್ಕರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ, ಗೋವಿಂದರಾಜು, ಎಂ.ರಾಮು, ಬಿ.ಟಿ. ನಾಗರಾಜ್, ಡಿ.ಎಚ್. ಕೃಷ್ಣ, ಟಿ.ಎಂ. ಮಂಜುನಾಥ್, ನಾಗರಾಜ್, ಎಂ.ವಿ. ಚಂದ್ರಶೇಖರ್, ಹನುಮಂತಪ್ಪ, ಚೌಡಪ್ಪ, ನಗರಸಭಾ ಸದಸ್ಯ ಜಿ. ಆನಂದಕುಮಾರ್, ಎಚ್. ಆನಂದ ಮತ್ತಿತರರು ಇದ್ದರು.