ಆರೋಗ್ಯ ಘಟಕಗಳ ಅಭಿವೃದ್ಧಿ ಮರೆತ ಸಭೆ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಡಿ.13
ಶಿರಾಳಕೊಪ್ಪ ಹಾಗೂ ಸುತ್ತಮುತ್ತಲ ಪ್ರಾಥಮಿಕ ಆರೋಗ್ಯ ಘಟಕಗಳ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಯಾವುದೇ ಪರಿಹಾರ ಕಾಣದೇ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ಸಮಾಧಾನಪಡಿಸುವ ಸಭೆಯಾಗಿ ಮುಕ್ತಾಯ ವಾಯಿತು.
ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಜಿಪಂ ಸದಸ್ಯರು ತಾಲೂಕು ಮೆಡಿಕಲ್ ಆಫೀಸರ್, ರೈತ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಸಭೆ ನಡೆಸಲಾಯಿತೇ ವಿನಹ ವೈದ್ಯ ನೇಮಕಾತಿ ಹಾಗೂ ಇತರ ಸಿಬ್ಬಂದಿ ನೇಮಕಾತಿ ಬಗ್ಗೆ ಯಾವುದೇ ತೀರ್ಮಾನವಾಗದೇ ಈ ಸಮಸ್ಯೆ ರಾಜ್ಯಾದ್ಯಂತ ಇರುವ ಸಮಸ್ಯೆ ಆಗಿದೆ. ಹಾಗಾಗಿ, ಇರುವಂತಹ ವ್ಯವಸ್ಥೆಯನ್ನೇ ಸದುಪಯೋಗಪಡಿಸಿಕೊಳ್ಳುವಂತಹ ಮಾತು ಕೇಳಿಬಂದವು.
ಟಿಎಚ್ಒ ನಾಗರಾಜ್ ನಾಯಕ್ ಸಭೆಯಲ್ಲಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ 30 ಹಾಸಿಗೆ ಇರುವಂತಹ ದೊಡ್ಡ ಆಸ್ಪತ್ರೆಯಲ್ಲಿ ಒಬ್ಬ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಲಾಗಿಲ್ಲ. ಈ ಭಾಗದ 9 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವಾರು ಕಡೆ ವೈದ್ಯರಿಲ್ಲ ಎಂಬ ಸಂಗತಿಯನ್ನು ಅವರೇ ತಿಳಿಸಿ ಶಿರಾಳಕೊಪ್ಪದಂತಹ ದೊಡ್ಡ ಆಸ್ಪತ್ರೆಗೆ ತೊಂದರೆ ಆಗದಿರಲೆಂದು ಅಕ್ಕಪಕ್ಕದ ಆರೋಗ್ಯಘಟಕ ದಿಂದ ವೈದ್ಯರನ್ನು ಸರತಿ ಮೆಲೆ ಡೆಪ್ಯುಟೇಶನ್ ಮಾಡಲಾಗಿದೆ. ಕಾಯಂ ವೈದ್ಯರನ್ನು ನೇಮಕ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪ್ರತಿ ತಿಂಗಳು ತಾಲೂಕು ಕೇಂದ್ರದಷ್ಟು ರೋಗಿಗಳು ಶಿರಾಳಕೊಪ್ಪ ಸಮುದಾಯ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ವೈದ್ಯರ ನೇಮಕಾತಿ ಇಲ್ಲದಿರುವುದರಿಂದ ಸಮಸ್ಯೆ ಹಾಗೆಯೇ ಉಳಿದಿದೆ. ಈ ವಿಷಯವನ್ನು ರಾಜ್ಯ ಸೆಕ್ರೆಟರಿಗಳ ಗಮನಕ್ಕೆ ತರಲಾಗಿದೆ. ಸಮಸ್ಯೆ ಬಗೆಹರಿದಿಲ್ಲ. ಎಂಬಿಬಿಎಸ್ ಪದವಿ ಪಡೆದ ಯಾವುದೇ ವೈದ್ಯರನ್ನು ನೀವು ಕರೆತಂದರೆ ಒಂದೇ ದಿನದಲ್ಲಿ ನೇಮಕಾತಿ ಮಾಡಿಸಿಕೊಡುವುದಾಗಿ ನಾಗರಾಜ್ ನಾಯಕ್ ತಿಳಿಸಿದರು.
ಜಿಪಂ ಸದಸ್ಯ ರುದ್ರಪ್ಪ ದಾನೇರ್, ಇಂದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕೊಟ್ಟಷ್ಟು ಸಂಬಳ ಎಂಬಿಬಿಎಸ್ ವೈದ್ಯರಿಗೆ ಕೊಟ್ಟರೆ ಯಾವ ವೈದ್ಯರೂ ಬರುವುದಿಲ್ಲ. ಈ ಭಾಗದಲ್ಲಿ ಇರುವಂತಹ ಪ್ರಾಥಮಿಕ ಆರೋಗ್ಯ ಘಟಕಗಳ ಆಶ್ರಯದಲ್ಲಿ ಬರುವ ಗ್ರಾಮಗಳಲ್ಲಿ ಎಸ್ಸಿ, ಎಸ್ಟಿ ಜನಾಂಗದವರಿದ್ದರೂ ವೈದ್ಯರಿಲ್ಲ ಎಂದರು.
ಜಿಪಂ ಸದಸ್ಯ ಈಶ್ವರಪ್ಪ ಮಾತನಾಡಿ ಡಿಎಚ್ಓ, ಟಿಎಚ್ಓ ಕೈಯಲ್ಲಿ ವೈದ್ಯರ ನೇಮಕಾತಿ ಅಧಿಕಾರವೂ ಇಲ್ಲ. ವೈದ್ಯರನ್ನು ವ್ಯವಸ್ಥೆ ಮಾಡಲೂ ಆಗದ ಹಾಗೆ ಆಗಿದೆ ಎಂದರು.
ಜಿಪಂ ಸದಸ್ಯ ಬಂಗಾರ್ ನಾಯಕ್ ಮಾತನಾಡಿ, ಇಂದು ವೈದ್ಯ ಶಿಕ್ಷಣ ಮುಗಿಸಿದವರು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಬಾರದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದರು.
ಡಾ. ಪ್ರಭು ಮಾತನಾಡಿ ಸರ್ಕಾರ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಕೆಲಸದ ಖಾತ್ರಿ ಇಲ್ಲ. ಸಂಬಳ ಹೆಚ್ಚಿಲ್ಲ. ಹೆಚ್ಚಿನ ವ್ಯಾಸಂಗಕ್ಕೆ ಅವಕಾಶ ಕಲ್ಪಿಸದೇ ಇರುವುದರಿಂದ ವೈದ್ಯರು ಕಾರ್ಯನಿರ್ವಹಿಸಲು ಮುಂದೆ ಬರುತ್ತಿಲ್ಲ. ಹಾಗೆಯೇ ಗ್ರಾಮಾಂತರ ಪ್ರದೇಶದಲ್ಲಿ ಜನರು ವೈದ್ಯ ಮೇಲೆ ಹಲ್ಲೆಗೆ ಬರುತ್ತಿದ್ದಾರೆ ಅವರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ ಎಂದರು.
ಸಭೆಯಲ್ಲಿ ಕೇಳಿ ಬಂದ ಮಾತು: ಖಾಸಗಿ ಆಸ್ಪತ್ರೆಯಲ್ಲಿ ದಿನಪೂರ್ತಿ ಕಾದು ಕುಳಿತು ಅವರು ಹೇಳಿದಷ್ಟು ಹಣ ಕೊಟ್ಟು ಬರುವ ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪುಕ್ಕಟೆ ಔಷಧಿ ಹಾಗೂ ಚಿಕಿತ್ಸೆ ಕೊಡುತ್ತಿದ್ದರೂ ಜನತೆ ವೈದ್ಯರ ಮೆಲೆ ಏರಿ ಹೋಗುವುದು ಕಡಿಮೆ ಆಗಬೇಕು ಎಂಬ ಸಲಹೆ ಮಾತು ಕೇಳಿಬಂತು.
ಕಾರ್ಯಕ್ರಮದಲ್ಲಿ ಉಡಗಣಿ- ತಾಳಗುಂದ ಹೋಬಳಿ ರೈತ ಸಂಘದ ಅಧ್ಯಕ್ಷ ರಾಜಣ್ಣ, ಮಾಳಗೊಂಡನಕೊಪ್ಪದ ವೀರಣ್ಣ, ಕಾರ್ಯದರ್ಶಿ ಕೊಟ್ರೇಶ್, ಆಸ್ಪತ್ರೆ ಸಮಿತಿಯ ಅಯೂಬ್ ಆಸ್ಪತ್ರೆಯ ವೈದ್ಯಾಧಿಕಾರಿ ಮೋಹನ್, ಇತರವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.