ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರಿ ವಸತಿ ಗೃಹಕ್ಕೆ ಬಲು ಬೇಡಿಕೆ

Rashmi Kasaragodu
Updated On : 14 Dec 2013, 10:28 am

ಕ.ಪ್ರ. ವಾರ್ತೆ     ಶಿವಮೊಗ್ಗ     ಡಿ.13
ನಗರದಲ್ಲಿರುವ ಸರ್ಕಾರಿ ವಸತಿ ಗೃಹಗಳಿಗೆ ಬಲು ಬೇಡಿಕೆ. ತಮಗೆ ವಸತಿಗೃಹ ಕಲ್ಪಿಸುವಂತೆ ನೂರಾರು ಸರ್ಕಾರಿ ನೌಕರರು ಅರ್ಜಿ ಹಾಕಿ ಸರತಿಯಲ್ಲಿ ಕಾದಿದ್ದಾರೆ. ಇದೇ ಸಂದರ್ಭದಲ್ಲಿ ಅನೇಕ ಅಧಿಕಾರಿ- ಸಿಬ್ಬಂದಿ ನಿಯಮ ಮೀರಿ ಸರ್ಕಾರಿ ವಸತಿ ಗೃಹಗಳನ್ನು ಬಳಸಿಕೊಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು, ಅಂತಹವರಿಗೆ ನೋಟಿಸ್ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಸರ್ಕಾರಿ ವಸತಿ ಗೃಹ ವ್ಯವಸ್ಥೆ ಕುರಿತಂತೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಶುಕ್ರವಾರ ಸಭೆ ನಡೆಸಿದ್ದು, ಅವಧಿ ಮೀರಿ ಸರ್ಕಾರಿ ಮನೆಗಳಲ್ಲಿ ವಾಸಿಸುತ್ತಿರುವ ನೌಕರರಿಗೆ ತಕ್ಷಣವೇ ಮನೆ ಖಾಲಿ ಮಾಡಲು ನೋಟಿಸ್ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿರುವ ಸರ್ಕಾರಿ ವಸತಿ ಗೃಹಗಳಲ್ಲಿ ಕೆಲ ಸಿಬ್ಬಂದಿ ಅವಧಿ ಮೀರಿ ವಾಸಿಸುತ್ತಿದ್ದಾರೆ. ಈಗಾಗಲೇ ಕೆಲವರಿಗೆ ನೋಟಿಸ್ ನೀಡಿದ್ದರೂ ಮನೆ ತೆರವು ಮಾಡಿಲ್ಲ. ಇಂತಹವರಿಗೆ ವಸತಿ ಗೃಹ ತೆರವುಗೊಳಿಸಲು ಅಂತಿಮ ಹಂತದ ಎಚ್ಚರಿಕೆ ನೋಟಿಸ್ ನೀಡಲು ಪಿಡಬ್ಲ್ಯೂಡಿ ಎಂಜಿನಿಯರ್ಗೆ ಡಿಸಿ ಸೂಚನೆ ನೀಡಿದ್ದಾರೆ.
ನಿಯಮ ಉಲ್ಲಂಘನೆ: ಸರ್ಕಾರದ ಮಾರ್ಗದರ್ಶನದ ಪ್ರಕಾರ ಎ, ಬಿ, ಸಿ ಹಾಗೂ ಡಿ ಗ್ರೂಪ್ ನೌಕರರಿಗೆ ವಸತಿ ಗೃಹ ಬಳಸಿಕೊಳ್ಳಲು ನಿರ್ದಿಷ್ಟಪಡಿಸಿದ ಕಾಲಮಿತಿ ಇರುತ್ತದೆ. ಈ ಅವಧಿ ಮೀರಿ 30ಕ್ಕೂ ಹೆಚ್ಚು ಮಂದಿ ನಗರದ ವಸತಿ ಗೃಹಗಳಲ್ಲಿ ಬೀಡು ಬಿಟ್ಟಿರುವ ಮಾಹಿತಿ ಇದೆ.
ಹಾಗೆಯೇ ತಮ್ಮ ಸ್ವಂತ ಮನೆ ಇದ್ದರೂ ಕೆಲವು ಅಧಿಕಾರಿಗಳು ಸರ್ಕಾರಿ ವಸತಿ ಗೃಹಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ಅರ್ಹರಿಗೆ ಅವಕಾಶ ಸಿಗುತ್ತಿಲ್ಲ. ಮತ್ತೆ ಕೆಲವರು ಬೇರೆ ಊರುಗಳಿಗೆ ವರ್ಗವಾಗಿದ್ದರೂ ಶಿವಮೊಗ್ಗದ ವಸತಿ ಗೃಹಗಳನ್ನು ತೆರವುಗೊಳಿಸಿಲ್ಲ. ನಿಗದಿತ ಅವಧಿ ಮೀರಿದ್ದರೂ ತಮ್ಮ ಕುಟುಂಬವನ್ನೂ ವಸತಿ ಗೃಹದಲ್ಲಿ ಬಿಟ್ಟು ತಾವು ಬೇರೆ ಊರುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಕಷ್ಟು ಉದಾಹರಣೆಗಳಿವೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ಸರ್ಕಾರಿ ಹಿರಿಯ ಅಧಿಕಾರಿ, ಕೆಲವು ಅಧಿಕಾರಿಗಳಿಗೆ ಸ್ವಂತ ಮನೆ ಇದ್ದರೂ ಸರ್ಕಾರಿ ವಸತಿ ಗೃಹ ಬಳಸಿಕೊಳ್ಳುತ್ತಿದ್ದಾರೆ. ಈ ಬೆಳಣಿಗೆಯಿಂದ ನೋವಾಗುತ್ತದೆ. ವಸತಿ ಗೃಹ ಬಳಸಿಕೊಳ್ಳಲು ಅರ್ಹತೆ ಇರುವ ಅಧಿಕಾರಿಗಳು ಇದ್ದರೂ ಅವಕಾಶ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲಿ ವ್ಯವಸ್ಥೆಯನ್ನು ಗಮನಿಸಿದರೆ ಇನ್ನೂ ನೂರಕ್ಕೂ ಹೆಚ್ಚು ಅರ್ಹರಾದ ನೌಕರರು ವಸತಿ ನಿಲಯ ಕಲ್ಪಿಸುವಂತೆ ಅರ್ಜಿ ಗುಜರಾಯಿಸಿದ್ದಾರೆ. ಆದರೆ, ಅವರಿಗೆ ವಸತಿ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಅಗತ್ಯದಷ್ಟು ವಸತಿ ಇಲ್ಲ ಎಂಬುದು ಅಧಿಕಾರಿಗಳು ನೀಡುವ ವಿವರಣೆ. ಒಂದು ಮಾಹಿತಿ ಪ್ರಕಾರ ನೂರಕ್ಕೂ ಹೆಚ್ಚು ಮಂದಿ ಅರ್ಹ ಸರ್ಕಾರಿ ಅಧಿಕಾರಿ- ನೌಕರ ವರ್ಗ ಸರ್ಕಾರಿ ವಸತಿಗಾಗಿ ಕಾದಿದೆ. ಸದ್ಯಕ್ಕೆ ಲಭ್ಯವಿರುವ ಮತ್ತು ನೋಟಿಸ್ ಕೊಟ್ಟ ನಂತರ ಖಾಲಿಯಾಗುವ ವಸತಿಗೃಹಗಳನ್ನು ಅರ್ಹ ಸಿಬ್ಬಂದಿಗೆ ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement