20 ನಿಮಿಷ 20 ಸುದ್ದಿ
ಶಿಕ್ಷಣಾಧಿಕಾರಿ ಭೇಟಿ: ಪರಿಶೀಲನೆ
ಶಿವಮೊಗ್ಗ: ಬಿಸಿಯೂಟದೊಂದಿಗೆ ಶಾಲಾ ಮಕ್ಕಳಿಗೆ ಚಪಾತಿಗೆಂದು ಕಳುಹಿಸಿರುವ ಗೋಧಿ ಕಳಪೆ ಮಟ್ಟದಾಗಿದೆ ಎಂಬ ಮಾಹಿತಿ ಮೇರೆಗೆ ಶುಕ್ರವಾರ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳು ಜಿಲ್ಲೆಯ ಕೆಲವು ತಾಲೂಕುಗಳ ಹಲವು ಶಾಲೆಗಳಿಗೆ ಭೇಟಿ ನೀಡಿ ಆಹಾರ ಪದಾರ್ಥ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಅನ್ಸರ್ ಆಲಿ ಬೇಗ್, ಸಾಗರ ತಾಲೂಕಿನ ಲಾವಿಗ್ಗೆರೆ, ತ್ಯಾಗರ್ತಿ, ಹೊಸಂತೆ, ಶಿವಮೊಗ್ಗ ತಾಲೂಕಿನ ಕುಂಸಿ, ಚೋರಡಿ ಶಾಲೆಗಳಿಗೆ ಭೇಟಿ ನೀಡಿದ್ದು, ಈ ಶಾಲೆಗಳಲ್ಲಿ ಪದಾರ್ಥಗಳು ಕಳಪೆಯಾಗಿರುವುದು ಕಂಡುಬಂದಿಲ್ಲ. ಅಂತಹ ಕಳಪೆ ಗುಣಮಟ್ಟದ ಪದಾರ್ಥಗಳು ಸರಬರಾಜು ಆಗಿದ್ದಲ್ಲಿ ಶಾಲಾ ಮುಖ್ಯ ಶಿಕ್ಷಕರು ತಕ್ಷಣ ತಮಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ದಿನಾಂಕ ನಮೂದಿಲ್ಲ: ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹಾಲಿನ ಪುಡಿ ಪೊಟ್ಟಣದ ಮೇಲೆ ತಯಾರಿಕಾ ದಿನಾಂಕ ಹಾಗೂ ಎಕ್ಸ್ಪೆರಿ ದಿನಾಂಕಗಳು ನಮೂದಾಗಿಲ್ಲದ ಬಗ್ಗೆ ಹಲವು ದೂರುಗಳು ಬಂದಿದ್ದು, ಇನ್ನು ಮುಂದೆ ಇಂತಹ ಪದಾರ್ಥಗಳನ್ನು ಸರಬರಾಜು ಮಾಡದಂತೆ ಸಂಬಂಧಿಸಿದವರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಹಿಂಸೆ ಕುರಿತು ಜಾಗೃತಿ ಕಾರ್ಯಕ್ರಮ
ಶಿವಮೊಗ್ಗ: ಅಪ್ನಾದೇಶ್ ಅಸೋಸಿಯೇಷನ್, ಭದ್ರಾವತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಆಶ್ರಯದಲ್ಲಿ ಬಿ.ಆರ್. ಪ್ರಾಜೆಕ್ಟ್ನ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸಭಾಂಗಣದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ 2005 ಕುರಿತು ಹೋಬಳಿ ಮಟ್ಟದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಪಂಚಾಯಿತಿ ಸದಸ್ಯ ಗಿರೀಶ್, ಮಹಿಳೆಯರಿಗೆ ಸಂಬಂಧಿಸಿದಂತೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನೇಕ ಪರಿಹಾರೋಪಾಯ ದೊರೆಯಲಿದೆ ಎಂದರು. ವಕೀಲ ವಿಜಯ, ವಕೀಲೆ ಪ್ರಭಾ ರಾಘವೇಂದ್ರ ವಿವಿಧ ವಿಷಯ ಕುರಿತು ಮಾಹಿತಿ ನೀಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಾಲಕ್ಷ್ಮೀ ಭಟ್, ಮಹಿಳಾ ಸಾಂತ್ವನ ಕೇಂದ್ರದ ಶಾಂತ, ಸಿಂಗನಮನೆ ಗ್ರಾಪಂಉಪಾಧ್ಯಕ್ಷೆ ರೇಣುಕಾಬಾಯಿ, ಸದಸ್ಯೆ ಅನಸೂಯ ಇತರರು ಇದ್ದರು.
17ರಂದು ರಜತಮಹೋತ್ಸವ
ಶಿವಮೊಗ್ಗ: ಇಲ್ಲಿನ ನವುಲೆಯಲ್ಲಿರುವ ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದ ರಜತಮಹೋತ್ಸವ ಸಮಾರಂಭ ಹೊರತರಲಾಗಿರುವ ವಿಶ್ವಚೇತನ ಸ್ಮರಣ ಸಂಚಿಕೆ ಹಾಗೂ ಶ್ರೀ ಶನೈಶ್ಚರ ಕಥಾಮೃತ ಸಿಡಿ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 17ರಂದು ದೇವಸ್ಥಾನದ ಆವರಣದಲ್ಲಿ ನಡೆಯುವುದು.
ಅಂದು ಬೆಳಿಗ್ಗೆ 6ಗಂಟೆಗೆ ಕಾಕಡಾರತಿ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ನವಗ್ರಹ ಪೂರ್ವಕ ಶನಿಶಾಂತಿ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಪೂಜೆ, ಪೂರ್ಣಾಹುತಿ, ಅಷ್ಟಾವದಾನ ನಡೆಯಲಿದೆ.
ಬೆಳಿಗ್ಗೆ 10.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಪ್ರಭುದತ್ತ ಮಹಾರಾಜ್, ಮರುಳಸಿದ್ದ ಸ್ವಾಮೀಜಿಯವರು ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸಿಡಿ ಬಿಡುಗಡೆ ಮಾಡುವರು. ಮುಖ್ಯ ಅತಿಥಿಯಾಗಿ ಡಾ.ಕೂಡಲಿ ಜಗನ್ನಾಥಶಾಸ್ತ್ರಿ, ಶಾಸಕರಾದ ಶಾರದಾ ಪೂರ್ಯಾನಾಯ್ಕ, ಎಂ.ಎನ್. ಸುಂದರರಾಜ್, ನಗರಸಭಾ ಸದಸ್ಯೆ ಅರ್ಚನಾ ಬಳ್ಳೆಕೆರೆ, ಎಂ. ಈಶ್ವರಪ್ಪ ಮತ್ತಿತರರು ಪಾಲ್ಗೊಳ್ಳುವರು. ಸಂಜೆ 6ರಿಂದ ಸಂಗೀತ ಸುಧೆ, 7ರಿಂದ ಕಾರ್ತಿಕ ದೀಪೋತ್ಸವ ನಡೆಯುವುದು.
ಸೂರು ಕಲ್ಪಿಸಲು ಒತ್ತಾಯ
ಶಿವಮೊಗ್ಗ: ಆಶ್ರಯ ಯೋಜನೆಯಡಿ ಮನೆ ನೀಡುವಂತೆ ಆಗ್ರಹಿಸಿ ನಗರದ ಸಹ್ಯಾದ್ರಿ ಕಾಲೇಜು ಬೈಪಾಸ್ ರಸ್ತೆಯ ಬಳಿ ವಾಸಿಸುತ್ತಿರುವ ಅಲೆಮಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ಅರ್ಪಿಸಿದರು. ಬೈಪಾಸ್ ರಸ್ತೆಯ ಖಾಲಿ ಜಾಗದಲ್ಲಿ ಕಳೆದ ಸರಿಸುಮಾರು 40 ವರ್ಷಗಳಿಂದ ಟೆಂಟ್, ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಇಲ್ಲಿರುವ ಬಹುತೇಕರು ಕಡುಬಡವರು, ಅನಕ್ಷರಸ್ಥರು, ಕೂಲಿ ಕಾರ್ಮಿಕರಾಗಿದ್ದಾರೆ. ಕೆಲವರು ಭಿಕ್ಷೆ ಬೇಡಿ ಜೀವನ ನಿರ್ವಹಿಸುತ್ತಿದ್ದಾರೆ. ಪ್ರಾಣಿಗಳಿಗಿಂತ ಕಡುಕಷ್ಟದ ಬಾಳು ತಮ್ಮದಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ. ಈಗಾಗಲೇ ಹಲವು ಬಾರಿ ಆಶ್ರಯ ಯೋಜನೆಯಡಿ ಮನೆ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ, ನಗರಸಭೆ ಆಡಳಿತಕ್ಕೆ ಮನವಿ ಅರ್ಪಿಸಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಕೂಡ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಿರಂತರ ಸಂಘಟನೆಯ ಗಂಗಣ್ಣಿ, ಸುಂಕಣ್ಣಿ, ಗಣೇಶ್ ಪ್ರಸಾದ್ ಸೇರಿದಂತೆ ಟಿ. ಅನಿಲ್ಕುಮಾರ್, ಜಾರ್ಡ್ ಸಲ್ಡಾನ್ ಮೊದಲಾದವರು ಉಪಸ್ಥಿತರಿದ್ದರು.
ಹೋರಾಟಕ್ಕೆ ಗ್ರಾಮಸ್ಥರು ಸಜ್ಜು
ಹೊಸನಗರ: ವಾರಾಹಿ ಯೋಜನೆಯ ನಿರ್ವಹಣೆಗೆ ಮಾಸ್ತಿಕಟ್ಟೆ ಸೂಕ್ತ ಪ್ರದೇಶವಾಗಿದ್ದರೂ ಅವೈಜ್ಞಾನಿಕವಾಗಿ ಕೆಪಿಸಿಯನ್ನು ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ಹೋರಾಟಕ್ಕಿಳಿಯಲು ಗ್ರಾಮಸ್ಥರು ಸಜ್ಜಾಗಿದ್ದಾರೆ.
ವಿದ್ಯುತ್ ಯೋಜನೆಗಾಗಿ ಎಲ್ಲವನ್ನು ಬರಿದು ಮಾಡಿಕೊಂಡ ಜನರ ಹಿತರಕ್ಷಣೆಗೆ ಕೆಪಿಸಿ ಮುಂದಾಗಬೇಕಿತ್ತು. ಆದರೆ ಇದ್ದ ಮತ್ತು ಇರಬಹುದಾದ ವ್ಯವಸ್ಥೆಯನ್ನು ಕಸಿದುಕೊಳ್ಳುತ್ತಿರುವ ಕೆಪಿಸಿ ಕ್ರಮ ಸರಿಯಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿ ಮಾಸ್ತಿಕಟ್ಟೆಯಿಂದ ಕೆಪಿಸಿ ಸ್ಥಳಾಂತರ ರದ್ದುಗೊಳಿಸುವ ನಿಟ್ಟಿನಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ.
ಸಭೆ: ಮಾಸ್ತಿಕಟ್ಟೆಯಿಂದ ಕೆಪಿಸಿ ಅವೈಜ್ಞಾನಿಕ ಸ್ಥಳಾಂತರದಿಂದ ಸುತ್ತಮುತ್ತಲಿನ ಪ್ರದೇಶಕ್ಕೆ ಆಗುವ ನಷ್ಟ ಮತ್ತು ಕೆಪಿಸಿಗೆ ಅನಗತ್ಯ ವೆಚ್ಚ ಮತ್ತು ಇತರ ಪರಿಣಾಮವಾಗಿ “OÚ«ÚsÚ®Úúڒ¥ÚÆÇ 3 ದಿನಗಳ ಕಾಲ ವರದಿ ಪ್ರಕಟಗೊಂಡ ಬೆನ್ನಲ್ಲೆ ಸಭೆ ಸೇರಿದ ಗ್ರಾಮಸ್ಥರು ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿದರು.
'ಅರ್ಹರಿಗೆ ಯೋಜನೆ ತಲುಪಿಸಿ'
ಶಿವಮೊಗ್ಗ: ಕೇಂದ್ರ ಸರ್ಕಾರದ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಲು ಸಹಕರಿಸಿ, ಜಾಗೃತಿ ಮೂಡಿಸಿದ ಆಶಾಕಾರ್ಯಕರ್ತೆ ಗೀತಾ ಅವರನ್ನು ತಾಲೂಕಿನ ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಎಂ.ಆರ್. ಗಾಯಿತ್ರಿ, ಮಧ್ಯಮವರ್ಗ, ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಫಲಾನುಭವಿಗಳು ಆರೋಗ್ಯದ ಬಗ್ಗೆ ಅರಿವಿರದೆ ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ತಮ್ಮ ಒತ್ತಡದ ಜೀವನ ಶೈಲಿಯಿಂದ ಹೃದಯರೋಗ, ಕ್ಯಾನ್ಸರ್, ಮೂತ್ರಪಿಂಡ, ಸುಟ್ಟುಗಾಯ, ನರರೋಗ, ನವಜಾತ ಶಿಶುಗಳಿಗೆ ಅನಾರೋಗ್ಯದಂತಹ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಇವರಿಗೆ ಆರೋಗ್ಯಶ್ರೀ ಯೋಜನೆಯ ಅರಿವು ಕಡಿಮೆ ಇರುತ್ತದೆ ಎಂದರು.
ಇಂತಹ ವರ್ಗದ ಜನರಿಗೆ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಆಶಾಕಾರ್ಯಕರ್ತೆಯರು ಮನೆ, ಮನಗೆ ತೆರಳಿ ಜಾಗೃತಿ ಮೂಡಿಸುತ್ತಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ನೇಪಥ್ಯಕ್ಕೆ ಜನಪದ ಕ್ರೀಡೆ: ವಿಷಾದ
ಸಾಗರ: ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ಜನಪದೀಯ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಕೆಳದಿ ಉತ್ಸವದ ಅಂಗವಾಗಿ ಕೆಳದಿ ಉತ್ಸವ ಆಚರಣಾ ಸಮಿತಿ ಶುಕ್ರವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಗುರಿಕಾಯಿ ಹೊಡೆಯುವ ಮೂಲಕ ಉದ್ಘಾಟಿಸಿ, ಯುವಜನರು ದಿಢೀರ್ ಹಣ ಹಾಗೂ ಪ್ರಚಾರ ಗಿಟ್ಟಿಸುವ ಕ್ರೀಡೆಯತ್ತ ಆಕರ್ಷಿತರಾಗುತ್ತಿರುವುದು ವಿಷಾದನೀಯ ಎಂದರು. ವ್ಯಕ್ತಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಸಜ್ಜಗೊಳಿಸುವ ಕ್ರೀಡೆಯತ್ತ ಯುವಜನರು ಆಸಕ್ತಿ ಬೆಳೆಸಿಕೊಳ್ಳಬೇಕು. ಹಿಂದೆ ಗ್ರಾಮೀಣರು ಕೃಷಿ ಚಟುವಟಿಕೆ ನಂತರ ಮನೋವಿಕಾಸಕ್ಕಾಗಿ ವಿವಿಧ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಹಬ್ಬ, ಉತ್ಸವ ಸಂದರ್ಭದಲ್ಲಿ ಅಂತಹ ಕ್ರೀಡೆಗಳ ಸ್ಪರ್ಧೆ ಏರ್ಪಡಿಸಿ ಗೆದ್ದವರ ಜೊತೆ ಸಂಭ್ರಮಿಸುತ್ತಿದ್ದರು. ಅಂತಹ ಪ್ರಕ್ರಿಯೆ ಪುನಾರಾವರ್ತನೆಯಾಗಬೇಕು. ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೆ ಅಂತಹ ಕ್ರೀಡೆಗಳ ಕುರಿತು ಮಾಹಿತಿ ನೀಡಿ ಅವರು ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಇತರರಿದ್ದರು.
ಹಂತ ಹಂತವಾಗಿ ಅಭಿವೃದ್ಧಿ: ಮಧು
ಸೊರಬ: ಪುರಾಣ, ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಚಂದ್ರಗುತ್ತಿ ಕ್ಷೇತ್ರದ ಅಭಿವೃದ್ಧಿ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಡಾರ್ಮೇಟ್ರಿ ಆಗುತ್ತಿರುವುದರಿಂದ ಇಲ್ಲಿಗೆ ಆಗಮಿಸುವ ಸಹಸ್ರಾರು ಭಕ್ತಾದಿ, ಪ್ರವಾಸಿಗರಿಗೆ ನೆರವಾಗುವಂತಾಗಿದೆ ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು.
ತಾಲೂಕು ಚಂದ್ರಗುತ್ತಿಯಲ್ಲಿ ಡಾರ್ಮೆಟ್ರಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಹಲವಾರು ಮನವಿಗಳು ಬಂದಿದ್ದು, ಹಂತಹಂತವಾಗಿ ಅನುಷ್ಠಾನಕ್ಕೆ ಮುಂದಾಗುವುದಾಗಿ ತಿಳಿಸಿದ ಅವರು, ಗುಣಮಟ್ಟದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು.
ಇದೇ ವೇಳೆ ಯಲವಾಟದಲ್ಲಿ ನಡೆದಿದೆ ಎನ್ನಲಾದ ಬಹಿಷ್ಕಾರ ಪ್ರಕರಣದ ಸುದ್ಧಿ ಕುರಿತು ಪ್ರಸ್ತಾಪಿಸಿ, ಇಂತಹ ಅಮಾನವೀಯ ಪದ್ಧತಿ ಎಲ್ಲೂ ನಡೆಯಬಾರದು, ಕಾನೂನಿನ ವಿರುದ್ಧವಾಗಿ ನಡೆಯುವ ಯಾವುದೇ ಚಟುವಟಿಕೆಗಳಿಗೆ ನಾನು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷೆ ಬಸಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ತಾಪಂ ಅಧ್ಯಕ್ಷ ಬಸವಲಿಂಗಪ್ಪ, ಉಪಾಧ್ಯಕ್ಷೆ ನೀಲಮ್ಮ ಸುರೇಶ್ ಇತರರಿದ್ದರು.
27ರಂದು ರಾಜ್ಯಕ್ಕೆ ಶುಕ್ಲಾ
ಶಿಕಾರಿಪುರ: ವಿಪ್ರ ಸಮಾಜದಲ್ಲಿ ವಿಪರೀತವಾಗಿರುವ ಕನ್ಯಾ ಸಮಸ್ಯೆಯ ಪರಿಹಾರಕ್ಕಾಗಿ ಡಿ.27ರಂದು ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸನ್ವಾಲಿ ಪ್ರಸಾದ್ ಶುಕ್ಲಾ ಉತ್ತರ ಭಾರತದಿಂದ ಕನ್ಯಾ ಪೋಷಕರ ಜತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕನ್ಯೆಯರ ಸಮಸ್ಯೆ ಪರಿಹಾರಕ್ಕಾಗಿ ವಿಪ್ರ ಸಮಾವೇಶದಲ್ಲಿನ ಭರವಸೆ ಈಡೇರಿಕೆಗೆ ಸಮಾಜ ನಿರಂತರ ಪ್ರಕ್ರಿಯೆ ನಡೆಸುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯದರ್ಶಿ ಮ.ಸ ನಂಜುಂಡಸ್ವಾಮಿ ತಿಳಿಸಿದರು. ಪಟ್ಟಣದ ಶ್ರೀ ಕೇವಲಾನಂದಾಶ್ರಮದಲ್ಲಿ ದತ್ತಜಯಂತಿ ಅಂಗವಾಗಿ ಶನಿವಾರ ನಡೆಯುತ್ತಿರುವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಶಿಕಾರಿಪುರ ತಾಲೂಕು ಬ್ರಾಹ್ಮಣ ಮಹಾಸಭಾದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಶಿವಾನಂದತೀರ್ಥರು, ಜಿಲ್ಲಾ ವಿಪ್ರ ಸಮಾಜದ ಕಾರ್ಯಕಾರಿ ಸದಸ್ಯ ವಸಂತಮಾಧವ, ತಾಲೂಕು ವಿಪ್ರ ಸಮಾಜದ ಅಧ್ಯಕ್ಷ ಗಣಪತಿಭಟ್, ವಿಪ್ರ ಮುಖಂಡ ಸೋಮಶೇಖರ್, ಮಂಜುನಾಥರಾವ್, ಪ್ರಕಾಶ್ ಹೋತನಕಟ್ಟೆ, ಚಿಕ್ಕಾಜೋಯ್ಸ್, ಪ್ರದೀಪ್ ದೀಕ್ಷಿತ್, ಉಮೇಶ್ ಭಟ್, ನರಸಿಂಹಜೋಯ್ಸ್, ಹರೀಶ್ ಜೋಯ್ಸ್ ಇತರರಿದ್ದರು.
ಕುಂದು ಕೊರತೆ ನಿವಾರಣಾ ಸಭೆ
ಶಿವಮೊಗ್ಗ: ಇಂದು ಮಹಿಳೆಯರಲ್ಲಿ ಹಣಕಾಸು ಸ್ಥಿತಿ ಉತ್ತಮವಾಗಿರಲು ಹಣಕಾಸು ಸಂಸ್ಥೆಗಳೇ ಕಾರಣ. ಅವರು ದುಡಿದ ಹಣ ಸದುಪಯೋಗ ಮಾಡಿಕೊಳ್ಳಲು ಇಂತಹ ಸಂಸ್ಥೆಗಳು ಜಾರಿಗೆ ತರುವ ಹಲವು ಯೋಜನೆಗಳು ಕೂಡಾ ಕಾರಣ ಎಂದು ಜಿಪಂ ಉಪಕಾರ್ಯದರ್ಶಿ ಕೆ.ಎಸ್. ಮಣಿ ಹೇಳಿದರು.
ಬೆಂಗಳೂರಿನ ಕರ್ನಾಟಕ ಕಿರು ಹಣಕಾಸು ಸಂಸ್ಥೆಗಳ ಒಕ್ಕೂಟ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಣಕಾಸು ನಿರ್ವಹಣೆಯ ತಿಳಿವಳಿಕೆ ಸಭೆ ಮತ್ತು ಗ್ರಾಹಕರ ಕುಂದು ಕೊರತೆ ನಿವಾರಣಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಹನಬಾರ್ಡ್ನ ಎಂ.ಎಸ್. ರಾಘವೇಂದ್ರ, ಕಿರು ಹಣಕಾಸು ಸಂಸ್ಥೆ ಒಕ್ಕೂಟದ ಖಜಾಂಚಿ ಆನಂದರಾವ್, ಸುರೇಶ್ ಕೆ. ಕೃಷ್ಣ, ಸಂಪತ್ ಕುಮಾರ್, ನವಚೇತನ ಸಂಸ್ಥೆಯ ಮಾರುತಿ ಇತರರಿದ್ದರು.
ಕೃಷಿ ವಿಚಾರ ಸಂಕಿರಣ
ಸೊರಬ: ಸ್ವಚ್ಛತಾ ಆಂದೋಲನ, ಮದ್ಯವ್ಯಸನ ಶಿಬಿರಗಳನ್ನು ನಡೆಸಿ, ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕ್ರಿಯಾಶೀಲವಾಗಿರುವುದು ಶ್ಲಾಘನೀಯ ಎಂದು ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ನುಡಿದರು.
ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಪ್ಪಗಡ್ಡೆ ವಲಯ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಇಂದು ನಗರ ಹಾಗೂ ಗ್ರಾಮೀಣ ಮಹಿಳೆಯರು ಸ್ವಾವಲಂಬಿಯಾಗಿ ಬದುಕುತ್ತಿರುವುದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣ ಎಂದ ಅವರು, ಮಹಿಳೆಯರ ಆರ್ಥಿಕಾಭಿವೃದ್ಧಿಯಷ್ಟೇ ಅಲ್ಲದೇ ಗ್ರಾಮೀಣ ಭಾಗದ ರೈತರಿಗೆ ಹೈನುಗಾರಿಕೆಯಂತಹ ಲಾಭದಾಯಕ ಚಟುವಟಿಕೆಗಳಿಗೆ ಪ್ರೇರಣೆ ನೀಡುವ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರಿಂದ ಇನ್ನೊಬ್ಬರ ಅಡಿಯಾಳಾಗದೇ ಸ್ವಾವಲಂಬಿ ಜೀವನವನ್ನು ರೂಪಿಸುವಲ್ಲಿ ತನ್ನದೇ ಆದ ಕಾರ್ಯಕ್ಷೇತ್ರದಲ್ಲಿ ತೊಡಗಿದೆ ಎಂದರು.
ಬದುಕಿಗೆ ಶಿಸ್ತು ಮುಖ್ಯ: ಕಿಮ್ಮನೆ
ಶಿವಮೊಗ್ಗ: ಪ್ರತಿಯೊಬ್ಬರಿಗೂ ಬದುಕಿನಲ್ಲಿ ಕನಿಷ್ಠ ಶಿಸ್ತು ಬಹುಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರೋಟರಿ ಜೂಬ್ಲಿ ಸಂಸ್ಥೆ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಡೆಸಿದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪದಲ್ಲಿ ವಂದನೆ ಸ್ವೀಕಾರ ಮತ್ತು ಅರ್ಹತಾ ಪತ್ರ ವಿತರಿಸಿ ಅವರು ಮಾತನಾಡಿದರು. ಆರೋಗ್ಯ ಶಿಸ್ತು ಕಾಪಾಡಿಕೊಳ್ಳುವುದು ದೇಶಕ್ಕೆ ತೀರಾ ಅಗತ್ಯವಿರುವ ವಿಷಯ. ಅದರೊಂದಿಗೆ ಪ್ರತಿಯೊಬ್ಬರೂ ತಮ್ಮ ಬದುಕಿದಲ್ಲಿ ಸಮಯ ಪಾಲನೆ, ಕ್ರಮಬದ್ಧತೆ ಸೇರಿದಂತೆ ಕೆಲವು ಶಿಸ್ತುಗಳನ್ನು ಅಳವಡಿಸಿಕೊಳ್ಳವುದು ಬಹುಮುಖ್ಯ ಎಂದರು. ಗಣ್ಯರನ್ನು ಸ್ವಾಗತಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೌಶಲೇಂದ್ರ ಕುಮಾರ್, ಆಯುಧ ಪರವಾನಗಿಗೆ ಬಂದೂಕು ತರಬೇತಿಯನ್ನು ಕಡ್ಡಾಯಗೊಳಿಸಲಿದೆ. ಈ ಹಿನ್ನೆಲೆಯಲ್ಲಿ ಪರವಾನಗಿ ಪಡೆದ ನಾಗರಿಕರು ನಿಯಮ ಉಲ್ಲಂಘಿಸದೆ, ಎಚ್ಚರಿಕೆಯಿಂದ ಬಳಸಬೇಕೆಂದರು.
ಧರ್ಮ ಆಚರಣೆಯಿಂದ ನೆಮ್ಮದಿ
ಸಾಗರ: ಸಂಪತ್ತಿಗಿಂತ ಧರ್ಮ ಪರಿಪಾಲನೆಯಿಂದ ಸಹಜ ನೆಮ್ಮದಿ ಲಭ್ಯವಾಗುತ್ತದೆ ಎಂದು ಮಳಲಿಮಠದ ಶ್ರೀ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಪಟ್ಟಣದ ಅಶೋಕ ರಸ್ತೆಯ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟಿಮಾರುತ ಮಹಾ ರಥೋತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು. ನೆಮ್ಮದಿಯ ಬದುಕಿಗೆ ಧರ್ಮ ಬುನಾದಿಯಾಗಬೇಕು. ಮನುಷ್ಯ ಆಧ್ಯಾತ್ಮ ಪರಿಪಾಲನೆ ಹಾಗೂ ಗುರುಹಿರಿಯರಲ್ಲಿ ಶ್ರದ್ಧಾಭಕ್ತಿಯನ್ನು ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವ್ಯವಸ್ಥೆ ಹಳಿ ತಪ್ಪುತ್ತಿದೆ. ಯಾರ ಮಾತನ್ನು ಯಾರೂ ಕೇಳದ ಸ್ಥಿತಿ ನಿರ್ಮಾಣವಾಗಿದೆ. ಇದು ಸಮಾಜದ ಅಧಃಪತನಕ್ಕೆ ಕಾರಣವಾಗಿದೆ ಎಂದರು. ಅತಿಯಾಸೆ ನಮ್ಮ ಬದುಕಿನ ಸ್ಥಿತ್ಯಂತರಕ್ಕೆ ಕಾರಣವಾಗಿದೆ ಎಂದರು. ನಗರಸಭೆ ಸದಸ್ಯ ಸಂತೋಷ್ ಶೇಟ್, ಸೈಯದ್ ಇಕ್ಬಾಲ್ ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ವೀರಾಂಜನೇಯ ರಥೋತ್ಸವ
ಭದ್ರಾವತಿ: ಶನಿವಾರ ಹನುಮ ಜಯಂತಿ ಪ್ರಯುಕ್ತ ನಗರದ ಹುತ್ತಾಕಾಲೋನಿಯ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಮುನ್ನಾದಿನ ದೇವತಾ ಪ್ರಾರ್ಥನೆ, ಗುರು ಗಣಪತಿಪೂಜೆ,ಪುಣ್ಯಾಹ, ಬಿಂಬಶುದ್ಧಿ, ಪ್ರಕಾರ ಶುದ್ಧಿ, ಗಣಪತಿಹೋಮ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ದಿಗ್ಬಲಿದಾನ, ಮಹಾಪೂಜೆ ನಡೆಸಲಾಯಿತು. ಶನಿವಾರ ಬೆಳಗ್ಗೆ ಪ್ರಧಾನ ಹೋಮ, ರಥಶುದ್ಧಿ, ನಂತರ ಬಲಿಪೂಜೆ ನೆರವೇರಿಸಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದ ಪ್ರಾಂಗಣದಲ್ಲಿ ಉತ್ಸವ ನಡೆಸಿ, ನಂತರ ಮಧ್ಯಾಹ್ನ 12.30ಕ್ಕೆ ರಥದಲ್ಲಿ ಉತ್ಸವಮೂರ್ತಿಯನ್ನು ಇರಿಸಿ ದೇವಾಲಯದ ಮುಂಭಾಗದಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅನೇಕರು ರಥದ ಮೇಲೆ ಬಾಳೆಹಣ್ಣು, ಉತ್ತುತ್ತಿ, ಕರಿಮೆಣಸಿನಕಾಳನ್ನು ಬೀರುವ ಮೂಲಕ ಮತ್ತೆ ಕೆಲವರು ರಥದ ಮುಂದೆ ತೆಂಗಿನಾಕಾಯಿ ಒಡೆಯುವ ಮೂಲಕ ಹರಕೆ ಸಮರ್ಪಿಸಿದರು. ಶಾಸಕ ಅಪ್ಪಾಜಿ, ಕಾಂಗ್ರೆಸ್ ಮುಖಂಡ ದಾಸೇಗೌಡ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
'ಮೀಸಲು ವಂಚಿಸುವ ಕುತಂತ್ರ'
ಶಿಕಾರಿಪುರ: ಡಾ.ಅಂಬೇಡ್ಕರ್ ದೇಶದ ವಿವಿಧ 101 ಜಾತಿಗಳನ್ನು ಪರಿಶಿಷ್ಟರು ಎಂದು ಗುರುತಿಸಿ ಸಂಪೂರ್ಣ ಅಭಿವೃದ್ಧಿಗಾಗಿ ಮೀಸಲಾತಿ ಜಾರಿಗೊಳಿಸಿದ್ದಾರೆ. ಇದೀಗ ಸದಾಶಿವ ಆಯೋಗದ ವರದಿಯ ಮೂಲಕ 99 ಜಾತಿಯನ್ನು ಮೀಸಲಾತಿಯಿಂದ ಹೊರಹಾಕುವ ಕುತಂತ್ರ ರೂಪಿಸಲಾಗಿದೆ ಎಂದು ತಾಲೂಕು ಸದಾಶಿವ ಆಯೋಗ ವಿರೋಧಿ ಒಕ್ಕೂಟದ ಸಂಚಾಲಕ ಹಾಗೂ ಎಪಿಎಂಸಿ ಅಧ್ಯಕ್ಷ ಸಣ್ಣಹನುಮಂತಪ್ಪ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದೇಶದ ಹಿಂದುಳಿದ 101 ಜಾತಿ ವರ್ಗಗಳನ್ನು ಅತಿ ಹಿಂದುಳಿದ ಪಂಗಡ ಎಂದು ಗುರುತಿಸಿ ಕಲ್ಲು ಒಡೆಯುವ, ಮೀನು ಹಿಡಿಯುವ, ಗುಡ್ಡಗಾಡುಗಳಲ್ಲಿ ವಾಸಿಸುವ ವಿವಿಧ ವರ್ಗದ ಜಾತಿಯನ್ನು ಪರಿಶಿಷ್ಟರು ಎಂದು ಇವರ ಸಂಪೂರ್ಣ ಅಭಿವೃದ್ಧಿಗೆ ಮೀಸಲಾತಿ ಮೂಲಕ ಸಂವಿಧಾನ ತಿದ್ದುಪಡಿಗೊಳಿಸಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದು ಇಂದಿಗೂ ತಮ್ಮ ಮೂಲ ಕಸುಬಿನಲ್ಲಿಯೇ ಸಮಾಜದಲ್ಲಿ ಅತ್ಯಂತ ಹಿಂದುಳಿದವರಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಅಸಮರ್ಥರಾದ 99 ಜಾತಿ ವರ್ಗವನ್ನು ಸರ್ಕಾರ ನ್ಯಾಯ ಮೂರ್ತಿ ಸದಾಶಿವ ಆಯೋಗದ ಮೂಲಕ ಹೊರಹಾಕುವ ಹುನ್ನಾರ ರೂಪಿಸಿದೆ ಎಂದು ಆರೋಪಿಸಿದರು.
ವಿಶ್ವ ಅಂಗವಿಕಲರ ದಿನ
ಶಿಕಾರಿಪುರ: ತಾಲೂಕು ಅಂಗವಿಕಲರ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನವನ್ನು ಗುರುತಿಸಿ ಪುರಸಭೆಯ ಮೂಲಕ ಉಚಿತವಾಗಿ ವಿತರಿಸಲು ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ. ಕೂಡಲೇ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪುರಸಭೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುವಂತೆ ಸಂಸದ ರಾಘವೇಂದ್ರ ಸೂಚಿಸಿದರು. ಶನಿವಾರ ಪಟ್ಟಣದ ಮಂಗಳ ಭವನದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಅಂಗವಾಗಿ ತಾಲೂಕು ಅಂಗವಿಕಲ ಹಿತರಕ್ಷಣಾ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗವೈಕಲ್ಯದ ಮನಸ್ಥಿತಿಯಿಂದ ಹೊರಬಂದು ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳುವತ್ತ ಅಂಗವಿಕಲರು ಯೋಚಿಸಬೇಕಾಗಿದೆ ಎಂದರು. ಅಂಗವಿಕಲರ ನೆರವಿಗೆಂದೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಸಿಎಂ ಆಗಿದ್ದ ಅವಧಿಯಲ್ಲಿ ಶೇ.75ಕ್ಕಿಂತ ಕಡಿಮೆ ವೈಕಲ್ಯದವರಿಗೆ 400 ಹಾಗೂ ಶೇ.75ಕ್ಕಿಂತ ಅಧಿಕ ವೈಕಲ್ಯದವರಿಗೆ 1000 ಮಾಸಾಶನ ಮೂಲಕ ಆರ್ಥಿಕ ಭದ್ರತೆ ಕಲ್ಪಿಸಿದ್ದಾರೆ ಎಂದರು. ಸ್ವಾಭಿಮಾನ ಬದುಕು ರೂಪಿಸಿಕೊಂಡು ಸವಾಲಾಗಿರುವ ವೈಕಲ್ಯ ಮೆಟ್ಟಿ ನಿಲ್ಲಬೇಕು ಎಂದರು.