ಕೇಂದ್ರ ವರದಿ ಹಿಂಪಡೆಯಲಿ: ಸಂಸದ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.14
ಅಡಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರವು ಸಲ್ಲಿಸಿರುವ ವರದಿ ಕೂಡಲೇ ಹಿಂಪಡೆಯಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದು, ಸರ್ಕಾರದ ಗಮನ ಸೆಳೆಯಲು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅಡಕೆ ನಿಷೇಧಿಸಿ ತೀರ್ಪು ನೀಡಿದರೆ ಅದು ರೈತರ ಪಾಲಿಗೆ ಮರಣಶಾಸನವಾಗಲಿದೆ. ಅಡಕೆ ಮೇಲೆ ಅವಲಂಬಿತರಾಗಿರುವ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೀಡಾಗಲಿವೆ ಎಂದರು.
ಸಂಸತ್ ಅಧಿವೇಶನದಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಪ್ರಸ್ತಾಪಿಸಲು ಸಾದ್ಯವಾಗಿಲ್ಲ. ಕಳೆದೊಂದು ವಾರದಿಂದ ಕೇವಲ ಒಂದೆರಡು ಗಂಟೆ ಮಾತ್ರ ಅಧಿವೇಶನ ನಡೆದಿದೆ. ಅಡಕೆ ಹಾನಿಕರ ಎಂದು ಕೇಂದ್ರ ಆರೋಗ್ಯ ಇಲಾಖೆಯು 2,600 ಪುಟಗಳ ವರದಿಯನ್ನು ಸುಪ್ರೀಂಕೋರ್ಟ್ಗೆ ನೀಡಿದೆ. ಗುಟ್ಕಾ ಜತೆಗೆ ಅಡಕೆಯೂ ಹಾನಿಕಾರ ಎಂದು ಈ ವರದಿಯಲ್ಲಿ ಹೇಳಿದೆ. ಈ ವರದಿ ಸಲ್ಲಿಕೆಯ ಹಿಂದೆ ಸಿಗರೇಟ್ ಲಾಬಿ ಕೆಲಸ ಮಾಡಿರುವ ಶಂಕೆ ಇದೆ ಎಂದರು. ಈ ಬಗ್ಗೆ ರಾಜ್ಯದ ಎಲ್ಲಾ ಸಂಸದರ ನಿಯೋಗದೊಂದಿಗೆ ತೆರಳಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಅಡಕೆ ಸಮಸ್ಯೆಗೆ ಕೇಂದ್ರ ಸರ್ಕಾರವು ಕಾನೂನಾತ್ಮಕವಾಗಿಯೇ ಪರಿಹಾರ ನೀಡಬೇಕು ಎಂದರು.
ಬತ್ತ, ಮೆಕ್ಕೆಜೋಳ: ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಆರಂಭಿಸಿದೆ. ಆದರೆ, ಈ ಬಾರಿ ಮಳೆಯ ಕಾರಣ ಮೆಕ್ಕೆಜೋಳ ಗುಣಮಟ್ಟ ಇಲ್ಲದ ಕಾರಣ ಇದೂವರೆಗೆ ಅತ್ಯಲ್ಪ ಎಂದರೆ 451 ಕ್ವಿಂಟಾಲ್ ಮಾತ್ರ ಖರೀದಿ ಆಗಿದೆ. ಸರ್ಕಾರ ಕೂಡಲೇ ಈ ಮೆಕ್ಕೆಜೋಳವನ್ನು ಖರೀದಿಸಬೇಕು. ಇದನ್ನು ಪಶು ಆಹಾರ, ಕೋಳಿ ಆಹಾರಕ್ಕಾಗಿ ಬಳಸಬೇಕು. ಇದಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.
ಬತ್ತ ಖರೀದಿ ಕೇಂದ್ರಗಳಲ್ಲಿಯೂ ಸಹ ಇದೇ ರೀತಿ ಸಮಸ್ಯೆ ಇದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿದರು.
ಕೇಂದ್ರ ಸರ್ಕಾರವು ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯನ್ನು ಜಂಟಿ ಸಹಭಾಗಿತ್ವದಲ್ಲಿ ನಡೆಸುವುದಕ್ಕೆ ನಮ್ಮ ಆಕ್ಷೇಪವಿದೆ. ಬಂಡವಾಳ ಹೂಡಿ ಕಾರ್ಖಾನೆ ನಷ್ಟದಲ್ಲಿದ್ದರೆ ಒಪ್ಪಬಹುದಿತ್ತು. ಆದರೆ ಸೇಲ್ ಈ ಕಾರ್ಖಾನೆಗೆ ಬಂಡವಾಳ ಹೂಡದೇ ನಷ್ಟ ಅನುಭವಿಸಿದ್ದರಿಂದ ಖಾಸಗಿ ಸಹಭಾಗಿತ್ವ ಒಪ್ಪಲು ಸಾಧ್ಯವಿಲ್ಲ ಎಂದ ಅವರು, ರಾಜ್ಯ ಸರ್ಕಾರವು ಗಣಿ ಗುರುತಿಸಲು ಸರ್ವೆ ಮಾಡುವುದಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದರು.
ಬಿಎಸ್ವೈ ತೀರ್ಮಾಕ್ಕೆ ಬದ್ಧ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, 10-15 ದಿನದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಪಕ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಯಡಿಯೂರಪ್ಪ ಅವರು ಕೈಗೊಳ್ಳುವ ತೀರ್ಮಾನಕ್ಕೆ ಪಕ್ಷದಲ್ಲಿರುವವರೆಲ್ಲರೂ ಬದ್ಧರಾಗಿರುತ್ತಾರೆ ಎಂದರು.