'ಮೌಲ್ಯಗಳ ಬಲವರ್ಧನೆಗೆ ಮಾರ್ಗದರ್ಶನ ಅಗತ್ಯ'
ಕ.ಪ್ರ. ವಾರ್ತೆ ಶಿವಮೊಗ್ಗ ಡಿ.14
ಮಕ್ಕಳಿಗೆ ಶಿಕ್ಷಕರು ಗುಣಾತ್ಮಕ ಶಿಕ್ಷಣವನ್ನು ನೀಡಬೇಕು ಎಂಬ ತುಡಿತ ಇರಬೇಕು. ಇದಕ್ಕಾಗಿ ಶಿಕ್ಷಕರಿಗೆ ಗುಣಾತ್ಮಕ ಕೌಶಲ್ಯಕ್ಕೆ ಬೇಕಾದ ಮೌಲ್ಯಗಳ ಬಲವರ್ಧನೆಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಆಶ್ರಯದಲ್ಲಿ ಶನಿವಾರ ನಗರದ ಡಯಟ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಜ್ಞಾನ ವಿಕಾಸಕ್ಕೆ ವಿಜ್ಞಾನ ವಸ್ತುಪ್ರದರ್ಶನ ಅತೀ ಅವಶ್ಯಕ. ದೇಶದ ಬದಲಾವಣೆಗೆ ಹಾಗೂ ಅವಿಷ್ಕಾರಕ್ಕೆ ಶಿಕ್ಷಣ ಇಲಾಖೆ ಕಾಳಜಿ ವಹಿಸಬೇಕಿದೆ ಎಂದರು.
ಪದವಿ ಎಲ್ಲರೂ ಪಡೆಯುತ್ತಾರೆ...: ವಿಶ್ವಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ಶಿಕ್ಷಕರಾದವರು ಮಾಡಬೇಕಿದೆ. ಏಕೆಂದರೆ ಮಕ್ಕಳು ಮುಂದಿನ ದೇಶದ ಜವಾಬ್ದಾರಿಯನ್ನು ಹೊರಲಿದ್ದಾರೆ. ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡಬೇಕು ಎಂದರಲ್ಲದೇ, ಕೇವಲ ಪದವಿ ಪಡೆಯುವುದೊಂದೇ ಮುಖ್ಯವಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಪದವಿ ಪಡೆಯುವುದು ಸಿನಿಮಾ ಟಿಕೆಟ್ ಪಡೆದಂತೆ ಆಗುತ್ತಿದೆ. ಪದವಿಯನ್ನು ಎಲ್ಲರೂ ಪಡೆಯುತ್ತಾರೆ. ಆದರೆ, ಆದರಾಚೆಗೂ ಒಂದು ಬದುಕಿದೆ ಎಂಬುದರ ಕುರಿತು ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿಫುಲ್ ಬನ್ಸಲ್, ಜಿಪಂ ಸಿಇಒ ಸಿಸಿಕಾಂತ್ ಸೆಂಥಿಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಸಿ. ಬಸವರಾಜಪ್ಪ, ಜಿಪಂ ಉಪಾಧ್ಯಕ್ಷೆ ಹೇಮಾಪಾವನಿ, ನಗರಸಭೆ ಅಧ್ಯಕ್ಷೆ ಖುರ್ಷಿದ್ ಬಾನು, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರಿ ಷಣ್ಮುಖಪ್ಪ ಇದ್ದರು.