ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೂ-ಹಣ್ಣುಗಳಲ್ಲಿ ಅರಳಿದ ಜೀವನ ಕಲೆ

Mainashree
Updated On : 15 Dec 2013, 10:45 am

ಕ.ಪ್ರ. ವಾರ್ತೆ  ಶಿವಮೊಗ್ಗ  ಡಿ.14
ಅಲ್ಲಿ ವಿವಿಧ ತರಕಾರಿಗಳಲ್ಲಿ ಅಲಂಕೃತಗೊಂಡ ಪ್ರಾಣಿ ಸಂಕುಲಗಳು, ಹೂವಿನಲ್ಲಿ ತಯಾರಾದ ಭೂಮಂಡಲ, ಮಂಗಳಯಾನಕ್ಕೆ ಸಿದ್ಧಗೊಂಡ ರಾಕೆಟ್, ಬಾಳೆದಿಂಡಿನ ತಾಜ್‌ಮಹಲ್, ಇವುಗಳ ನಡುವೆ ಇಬ್ಬರು ಭಾರತರತ್ನ ಮಹನೀಯರಿಗೆ ಅಭಿನಂದನೆ..!
ಇದೆಲ್ಲ ಕಂಡುಬಂದಿದ್ದು ನಗರದ ಗಾಂಧಿಪಾರ್ಕ್ ಆವರಣದಲ್ಲಿ. ಜಿಲ್ಲಾ ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಮತ್ತು ಆತ್ಮ ಯೋಜನೆ ಆಶ್ರಯದಲ್ಲಿ ಶನಿವಾರ ನಗರದ ಗಾಂಧಿಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಇದಕ್ಕೆ ಸಾಕ್ಷಿಯಾಯಿತು.
ಕಾಳಿಂಗಮರ್ದನ, ನವಿಲುಗಳು, ಗಂಡಬೇರುಡ, ಆನೆ, ಮಂಗಳಯಾನಕ್ಕೆ ಸಿದ್ಧಗೊಂಡಿರುವ ರಾಕೆಟ್, ಭೂಮಂಡಲ ಹೂವಿನಲ್ಲಿ ಅಲಂಕೃತಗೊಂಡರೆ, ತರಕಾರಿ, ಹಣ್ಣುಗಳಲ್ಲಿ ಗಣಪತಿ, ತಂಬೂರಿ, ಶಿವ, ಸಿಂಹ, ಡೈನೋಸರ್, ಗರುಡ, ಬಾತುಕೊಳಿ ಸೇರಿದಂತೆ ವಿವಿಧ ಪ್ರಾಣಿಗಳು ಕಂಡುಬಂದವು. ಕುಂಬಳಕಾಯಿಲ್ಲಿ ಮಾಡಿದ ಗಣಪತಿ ಹಾಗೂ ಆಗಲುಕಾಯಿಯಲ್ಲಿ ಮಾಡಿದ ಡೈನೋಸಾರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಇನ್ನೂ ಪ್ರದರ್ಶನದಲ್ಲಿ ವಿವಿಧ ತಳಿಗಳ ಅಡಕೆ, ತೆಂಗು, ಶುಂಠಿ, ಸಪೋಟ, ಪಪ್ಪಾಯಿ, ಹೂಕೋಸು, ಮೂಲಂಗಿ, ತಾಳೆ ಬೆಳೆ ತಳಿಗಳು ಹಾಗೂ ಬಾಳೆಯ ವಿವಿಧ ತಳಿಗಳಾದ ಬೂದುಬಾಳೆ, ಕಲ್ಲುಬಾಳೆ, ಪಚ್ಚಬಾಳೆ, ಕೆಂಪುಬಾಳೆ, ನೇಂದ್ರ, ಏಲ್ಲಕ್ಕಿ ಇದ್ದವು.
ಇದರೊಂದಿಗೆ ಜಲಾನಯನ ಅಭಿವೃದ್ಧಿ ಇಲಾಖೆ ತನ್ನ ಮಳಿಗೆಯಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿತು. ಮೀನುಗಾರಿಕೆ ಇಲಾಖೆ ಮಳಿಗೆಯಲ್ಲಿ ಮತ್ಸ್ಯಲೋಕವೇ ಕಂಡುಬಂತು. ಎಲ್ಲಾ ತಳಿಗಳ ಮೀನುಗಳು ಹಾಗೂ ಸಾಕುವ ವಿಧಾನಗಳನ್ನು ವಿವರಿಸಲಾಯಿತು. ಇನ್ನೂ ಹಸಿರು ಹೊಂದಿಕೆ-ಲಂಬವಾಗಿ ಅಳವಡಿಕೆ (ವರ್ಟಿಕಲ್ ಗಾರ್ಡ್‌ನ್) ಇಲ್ಲಿತ್ತು.
ರಂಗೋಲಿ:  ಪ್ರದರ್ಶನದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಹಲವು ಮಾದರಿಯ ರಂಗೋಲಿ ಕಲೆಗಳು ಮಹಿಳೆಯರಿಂದ ರಚಿತವಾದವು. ಕೆಲವರು ಸಾಮಾನ್ಯ ರೀತಿಯಲ್ಲಿ ಚಿತ್ರಿಸಿದರೆ, ಮತ್ತೊಂದಿಷ್ಟು ಮಂದಿ, ತರಕಾರಿಯಲ್ಲಿ ಚಿಟ್ಟೆ, ವೃತ್ತಕಾರದಲ್ಲಿ ವಿಭಿನ್ನ ರೀತಿಯ ರಂಗೋಲಿ, ಹೂವಿನಲ್ಲಿ ತ್ರಿಶೂಲ ಹಾಗೂ ಮಕ್ಕಳಿಂದ ಗಣಪತಿ ಚಿತ್ರಗೊಂಡವು.
ಭಾರತರತ್ನ ಮಹನೀಯರಿಗೆ ಅಭಿನಂದನೆ:  ಇತ್ತಿಗಷ್ಟೇ ಭಾರತರತ್ನ ಪ್ರಶಸ್ತಿ ಸ್ವೀಕರಿಸಿದ ಕರುನಾಡಿನ ಹೆಮ್ಮೆಯ ಪುತ್ರಸ ವಿಜ್ಞಾನ ಕ್ಷೇತ್ರದ ದಿಗ್ಗಜ ಚಿಂತಾಮಣಿ ನಾಗೇಶ್ ರಾಮಚಂದ್ರ ರಾವ್ ಹಾಗೂ ಕ್ರಿಕೆಟ್‌ನಲ್ಲಿ ಅಪ್ರತಿಮ ಸಾಧನೆಗೈದ ಸಚಿನ ರಮೇಶ್ ತೆಂಡೂಲ್ಕರ್ ಅವರಿಗೆ ಪುಷ್ಪಗಳಲ್ಲಿ ಭಾರತರತ್ನ ಎಂದು ಚಿತ್ರಿಸಿ ಅಭಿನಂದನೆ ಸಲ್ಲಿಸಲಾಯಿತು.
ಸಂತಾಪ: ಕೆಲವೇ ದಿನಗಳಿಂದೆಯಷ್ಟೇ ಮೃತರಾದ ಪ್ರಗತಿಪರ ರೈತ ಹಾಗೂ ಯಂತ್ರಗಳ ಸೃಷ್ಟಿಸಿದ ಕೃಷಿ ಋಷಿ ಡಾ.ದೇವಂಗಿ ಪ್ರಪುಲ್ಲಚಂದ್ರ ಅವರಿಗೆ ಪ್ರದರ್ಶನದಲ್ಲಿ ಸಂತಾಪ ಸೂಚಿಸಲಾಯಿತು.
ಇಂದು ಮತ್ತು ನಾಳೆಯು (ಡಿ.15, 16) ಫಲಪುಷ್ಪ ಪ್ರದರ್ಶನ ಇರುತ್ತದೆ. ಸಾರ್ವಜನಿಕರು, ಪರಿಸರ ಪ್ರೇಮಿಗಳು ಆಗಮಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement