ಕೆಳದಿ ಇತಿಹಾಸ ಪರಿಚಯಿಸಿ: ನಾ.ಡಿಸೋಜ
ಸಾಗರ: ಮಾಹಿತಿ ಕೊರತೆಯಿಂದ ಕೆಳದಿ ಇತಿಹಾಸದ ಬಗ್ಗೆ ಜನಸಾಮಾನ್ಯರಿಗೆ ಪರಿಚಯವಿಲ್ಲದಂತಾಗಿದೆ ಎಂದು 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸಾಹಿತಿ ಡಾ.ನಾ. ಡಿಸೋಜ ಹೇಳಿದರು.
ತಾಲೂಕಿನ ಕೆಳದಿಯಲ್ಲಿ ಭಾನುವಾರ ರಾಜ್ಯ ಸರ್ಕಾರ ಆಯೋಜಿಸಿದ್ದ ಕೆಳದಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೆಳದಿ ಅರಸರು ಬಹಳ ವರ್ಷಗಳ ಕಾಲ ಆಡಳಿತ ನಡೆಸಿದ್ದರೂ, ಜನರಿಗೆ ಕೆಳದಿ ಅರಸರ ಬಗ್ಗೆ, ಅವರ ಆಡಳಿತ ವೈಖರಿಯ ಬಗ್ಗೆ ಪರಿಚಯವಿಲ್ಲದಿರುವುದು ವಿಷಾದನೀಯ ಎಂದರು.
ಬೆಳಕು ಚೆಲ್ಲುವ ಕೆಲಸ: ಸರ್ಕಾರ ಕೆಳದಿ ಸಾಮ್ರಾಜ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಹೇಳಿದ ಅವರು, ಸರ್ಕಾರದ ನೆರವು ಕೆಳದಿ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸಕ್ಕೆ ಸಿಗುವಂತಾಗಬೇಕು. ಇಂತಹ ಉತ್ಸವಗಳ ಮೂಲಕ ಜನಸಾಮಾನ್ಯರಿಗೆ ಕೆಳದಿ ಸಾಮ್ರಾಜ್ಯದ ಪರಿಚಯವಾಗಬೇಕು. ಕೆಳದಿ ರಾಣಿ ಚೆನ್ನಮ್ಮ 25 ವರ್ಷ ಧೀರ್ಘಕಾಲ ರಾಜ್ಯಭಾರ ಮಾಡಿದ್ದಳು. ಆದರೆ ನಮಗೆ ಕಿತ್ತೂರು ರಾಣಿ ಚೆನ್ನಮ್ಮಳ ಬಗ್ಗೆ ತಿಳಿದಿದೆಯೇ ಹೊರತು ಕೆಳದಿ ಚೆನ್ನಮ್ಮಳ ಬಗ್ಗೆ ತಿಳಿದಿಲ್ಲ. ಇಂತಹ ಉತ್ಸವಗಳ ಮೂಲಕ ಇತಿಹಾಸವನ್ನು ನೆನಪು ಮಾಡಿಕೊಳ್ಳಬೇಕು. ಉತ್ಸವ ನಡೆಸುವ ಸ್ಫೂರ್ತಿ ನಿರಂತವಾಗಿದ್ದು, ಪ್ರತಿವರ್ಷ ನಡೆಸುವಂತಾಗಬೇಕು ಎಂದರು.
ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನ ನಾ. ಡಿಸೋಜ ಅವರನ್ನು ಸನ್ಮಾನಿಸಿದರು. ಸಚಿವ ಕಿಮ್ಮನೆ ರತ್ನಾಕರ, ಎಚ್. ಆಂಜನೇಯ, ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಹಾಜರಿದ್ದರು.