'ಕೋಮು ಸಂಘರ್ಷಹುಟ್ಟುಹಾಕುವ ಹುನ್ನಾರ'
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.15 ಬಿಜೆಪಿಯವರು ಕೋಮು ಸಂಘರ್ಷ ಹುಟ್ಟುಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ ಪ್ರಮುಖರು ಕಳೆದ ಆರು ತಿಂಗಳುಗಳಿಂದ ನಿರುದ್ಯೋಗಿಯಾಗಿದ್ದಾರೆ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಇಲ್ಲಸಲ್ಲದ ಆರೋಪ: ನಮ್ಮ ಸರ್ಕಾರದ ಅಭಿವೃದ್ಧಿ ವೇಗ ಕಂಡು ಬಿಜೆಪಿ ಮುಖಂಡರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ, ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲಸಲ್ಲಸ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ ಅವರು, ರಾಜ್ಯದಲ್ಲಿ ಬಿಜೆಪಿ ಆಕಸ್ಮಿಕವಾಗಿ ಅಧಿಕಾರಕ್ಕೆ ಬರುವಂತಾಯಿತು. ಆದರೆ ಸಮರ್ಥವಾಗಿ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಯಿತು ಎಂದು ಹೇಳಿದರು.
ಭ್ರಷ್ಟಾಚಾರದಿಂದಾಗಿ ಬಿಜೆಪಿ ಸರ್ಕಾರ ಘನತೆ, ಗೌರವ ಹಾಳುಮಾಡಿಕೊಂಡು ಅಧಿಕಾರದಿಂದ ವಂಚಿತವಾಗಬೇಕಾಯಿತು. ಈಗ ನಿರುದ್ಯೋಗಿಗಳಾಗಿ ಜನರಿಗೆ ತಪ್ಪುಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ, ಜನರಲ್ಲಿ ಗೊಂದಲ ಮೂಡಿಸಿ ಕೋಮು ಸಂಘರ್ಷ ಹುಟ್ಟು ಹಾಕುವ ಪ್ರಯತ್ನ ನಡೆಸಿದ್ದಾರೆ ಎಂದರು.
ಶಾದಿಭಾಗ್ಯ: ಅಲ್ಪಸಂಖ್ಯಾತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಾದಿಭಾಗ್ಯ ಯೋಜನೆ ಜಾರಿಗೊಳಿಸಿದೆವು. ಆದರೆ, ಬಿಜೆಪಿಯವರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಮಾಜಿ ಶಾಸಕ ಕರಿಯಣ್ಣ, ನಗರಸಭಾ ಅಧ್ಯಕ್ಷೆ ಖುರ್ಷಿದಾ ಬಾನು ಉಪಸ್ಥಿತರಿದ್ದರು.