ಮೂವರು ಕಳ್ಳಿಯರ ಬಂಧನ
ಸಾಗರ: ಬಸ್ಸಿನಲ್ಲಿ ಬಂಗಾರ ಕಳವು ಮಾಡಿದ ಮೂವರು ಮಹಿಳೆಯರನ್ನು ಇಲ್ಲಿನ ಪೇಟೆಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಮಾಲು ಸಹಿತ ಹಿಡಿದ ಘಟನೆ ಭಾನುವಾರ ಸಂಜೆ ನಡೆದಿದೆ. ಆರೋಪಿಗಳನ್ನು ಭದ್ರಾವತಿಯ ಹನುಮಂತನಗರ ಬೋವಿ ಕಾಲೋನಿಯ ಲಲಿತಾ, ಶಿಶಿಲಾ, ಮಂಜುಳಾ ಎಂದು ಗುರುತಿಸಲಾಗಿದೆ.
5ಲಕ್ಷ ಮೌಲ್ಯದ ಬಂಗಾರ: ರಾಧಾ ಸುಬ್ರಾಯ ಭಂಡಾರಿ ಎಂಬ ನಿವೃತ್ತ ಶಿಕ್ಷಕಿ ತಮ್ಮ ತವರುಮನೆಯಾದ ಹೊನ್ನಾವರ ತಾಲೂಕಿನ ಕೆರೆಕೋಣಕ್ಕೆ ತೆರಳಿದ್ದರು. ಭಾನುವಾರ ಮಧ್ಯಾಹ್ನ ತಮ್ಮ ಗಂಡನಮನೆ ಶಿರಸಿಗೆ ತೆರಳಲು ಹೊನ್ನಾವರದ ಬಸ್ಸು ನಿಲ್ದಾಣದಲ್ಲಿ ಬಸ್ ಏರುತ್ತಿದ್ದಾಗ ಆರೋಪಿಗಳು ಆವರ 5ಲಕ್ಷ ಮೌಲ್ಯದ 170 ಗ್ರಾಂ ಬಂಗಾರ ಲಪಟಾಯಿಸಿದ್ದರು ಎನ್ನಲಾಗಿದೆ. ಕೆಲವು ಸಮಯದ ನಂತರ ತಮ್ಮ ಬಂಗಾರ ಕಳುವಾದ ವಿಷಯ ತಿಳಿದ ರಾಧಾ ಸುಬ್ರಾಯ ಭಂಡಾರಿ ಹೊನ್ನಾವರದ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಇತ್ತ ಬಂಗಾರ ಕದ್ದ ಭದ್ರಾವತಿ ಮೂಲದ ಮೂವರು ಮಹಿಳೆಯರು ಭದ್ರಾವತಿಗೆ ತೆರಳಲು ಕಾರವಾರ ಚಿಕ್ಕಮಗಳೂರು ಬಸ್ಸು ಹತ್ತಿದ್ದಾರೆ. ಬಸ್ಸು ಸಾಗರ ಸಮೀಪ ಬರುವಾಗ ಆ ಮೂವರು ಕದ್ದ ಬಂಗಾರ ಹಂಚಿಕೊಳ್ಳುವ ವಿಷಯ ಮಾತನಾಡುತ್ತಿದ್ದುದನ್ನು ಗಮನಿಸಿದ ಬಸ್ಸಿನ ಚಾಲಕ, ನಿರ್ವಾಹಕ ಅನುಮಾನಗೊಂಡು ಸಾಗರದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆ ನಡೆಸಿದ ಸಾಗರದ ಪೊಲೀಸರು ಎಲ್.ಬಿ.ಕಾಲೇಜಿನ ಬಳಿ ಆರೋಪಿಗಳನ್ನು ಹಿಡಿದಿದ್ದಾರೆ. ಆರೋಪಿಗಳಿಂದ ಕದ್ದ ಬಂಗಾರವನ್ನು ವಶಪಡಿಸಿಕೊಂಡು ಹೊನ್ನಾವರದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೊನ್ನಾವರದ ಪೊಲೀಸರು ಸಾಗರಕ್ಕೆ ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಡಿಕ್ಕಿ: ವ್ಯಕ್ತಿ ಸಾವು
ಸೊರಬ: ಇಲ್ಲಿನ ನಡಹಳ್ಳಿ ಬಳಿ ಭಾನುವಾರ ನಡೆದ ಬಸ್ ಮತ್ತು ಬೈಕ್ ಡಿಕ್ಕಿ ಅಪಘಾತದಲ್ಲಿ ಜೇಡಗೆರೆ ಸಂತೋಷ್ (25) ಮೃತಪಟ್ಟಿದ್ದಾರೆ. ಮದುವೆ ದಿಬ್ಬಣ ಕರೆ ತರುವ ಸಲುವಾಗಿ ಸಾಗರ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಸಂತೋಷ್ ಮೃತಪಟ್ಟಿದ್ದಾರೆ. ಉದ್ರಿಕ್ತರು ಬಸ್‌ಗೆ ಕಲ್ಲು ತೂರಿ ಗಾಜು ಒಡೆದುಹಾಕ್ದಾರೆ.