ಸಂಚಾರ ವ್ಯವಸ್ಥೆ ಸರಿಪಡಿಸಿ
ಶಿವಮೊಗ್ಗ ಬಸ್ ನಿಲ್ದಾಣ ಸುತ್ತಮುತ್ತ ಸಂಚಾರ ವ್ಯವಸ್ಥೆ ಸುಗಮವಾಗಿಲ್ಲ. ಅಲ್ಲಲ್ಲೇ ನಿಲ್ಲುವ ಆಟೋಗಳು, ಬೀದಿ ಬದಿ ವ್ಯಾಪಾರ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಉದ್ದೇಶದಿಂದ ನಿಧಾನವಾಗಿ ಚಲಿಸುವ ಬಸ್‌ಗಳು ಹೀಗೆ ಹತ್ತಾರು ಸಮಸ್ಯೆಗಳು ಅಲ್ಲಿ ಪ್ರತಿ ನಿತ್ಯ ಕಾಣಿಸಿಕೊಳ್ಳುತ್ತಿದೆ. ಸಂಚಾರಿ ಪೊಲೀಸರು ಅಲ್ಲೇ ಇದ್ದು ಕಂಡೂ ಕಾಣದಂತಿರುತ್ತಾರೆ. ತಳ್ಳುಗಾಡಿಗಳು ಹಾಗೂ ಆಟೋದವರ ಹಾವಳಿ ಮಿತಿಮೀರಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಈ ಕಾರಣದಿಂದಾಗಿ ಪಾದಚಾರಿಗಳು ಸುಗಮವಾಗಿ ಈ ವ್ಯಾಪ್ತಿಯಲ್ಲಿ ಓಡಾಡಲು ಸಾದ್ಯವಿಲ್ಲವಾಗಿದೆ. ರಸ್ತೆ ದಾಟುವುದು ದುಸ್ತರವಾಗಿದೆ. ಈ ವ್ಯಾಪ್ತಿಯಲ್ಲಿ ಸುಗಮ ಸಂಚಾರವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಸಕ್ತಿ ವಹಿಸುವುದು ಮುಖ್ಯವೆನಿಸುತ್ತಿದೆ. ವಿನಾಕಾರಣ ರಸ್ತೆ ಮಧ್ಯೆದಲ್ಲಿಯೇ ಆಟೋಗಳನ್ನು ನಿಲ್ಲಿಸುವ ಸಂಪ್ರದಾಯಗಳಿಗೆ ತಿಲಾಂಜಲಿ ಹಾಡಬೇಕಾಗಿದೆ.
-ರಾಜೇಶ್, ಶಿವಮೊಗ್ಗ
ನಗರ ಸಾರಿಗೆಗೆ ಮಿತಿ ಬೇಕು
ಶಿವಮೊಗ್ಗ ನಗರ ಸಾರಿಗೆ ವ್ಯವಸ್ಥೆ ಸುಲಲಿತವಾಗಿಲ್ಲ. ನಗರ ಸಾರಿಗೆ ಸಿಬ್ಬಂದಿಯ ಬೇಕಾಬಿಟ್ಟಿ ವರ್ತನೆಗಳು ಬೇಸರ ತರಿಸುತ್ತವೆ. ಒಂದೋ ಅತಿವೇಗವಾಗಿ ಪೈಪೋಟಿಯಿಂದ ನುಗ್ಗುವುದೋ, ಇಲ್ಲವೇ ಅತಿ ನಿಧಾನವಾಗಿ ಚಲಿಸುವ ಬಸ್‌ಗಳು ಪ್ರಯಾಣಿಕರಿಗೆ ಇರುಸು ಮುರುಸು ಉಂಟುಮಾಡುತ್ತಿವೆ. ಈ ಬಗ್ಗೆ ಚಕಾರ ಎತ್ತಿದರೆ ಗದರುತ್ತಾರೆ. ಸಿಟಿ ಬಸ್ ಸಿಬ್ಬಂದಿ ಈ ವಿಚಾರದಲ್ಲಿ ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು ಒಳಿತು. ಇಲ್ಲವೇ ಜಿಲ್ಲಾ ಪೊಲೀಸ್ ಇಲಾಖೆ ನಗರಸಾರಿಗೆ ಸಿಬ್ಬಂದಿಗೆ ವಿಶೇಷ ತರಬೇತಿ ಕೊಟ್ಟು ಸೌಜನ್ಯದಿಂದ ನಡೆದುಕೊಳ್ಳುವ ಕುರಿತು ಮಾರ್ಗದರ್ಶನ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಗರ ಸಾರಿಗೆ ಮಾಲಿಕರೂ ಸಹ ಚಿಂತನೆ ನಡೆಸುವ ಅಗತ್ಯವಿದೆ.
-ಗಾಯತ್ರಿ, ವಿನೋಬನಗರ, ಶಿವಮೊಗ್ಗ.
ಶುಲ್ಕ ಬೇಡ
ಶಿವಮೊಗ್ಗ ಗಾಂಧಿ ಪಾರ್ಕ್‌ನಲ್ಲಿ ಪ್ರತಿ ದಿನ ವಾಕಿಂಗ್ ಮಾಡುವವರಿಗೆ ಯಾವುದೇ ಶುಲ್ಕ ವಿಧಿಸುವುದು ಬೇಡ. ಬೆಳಗಿನ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ವಾಕಿಂಗ್‌ನಲ್ಲಿ ತೊಡಗಿರುತ್ತಾರೆ. ಕೌಟುಂಬಿಕ ಕೆಲಸಕಾರ್ಯಗಳಿರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯಾಹ್ನ ತರುವಾಯ ವಾಕಿಂಗ್‌ಗೆ ಬರುತ್ತಾರೆ. ಸದ್ಯಕ್ಕೆ ಶಿವಮೊಗ್ಗ ನಗರದಲ್ಲಿ ವಾಕಿಂಗ್‌ಗೆ ಹೇಳಿ ಮಾಡಿಸಿದ ಸ್ಥಳ ಗಾಂಧಿಪಾರ್ಕ್. ಹೀಗಿರುವಾಗ ಪಾಸ್ ಅಥವಾ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಶುಲ್ಕ ರಹಿತ ವಾಕಿಂಗ್‌ಗೆ ಅವಕಾಶ ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕು.
-ದಿವ್ಯಶ್ರೀ, ಪಾರ್ಕ್ ಬಡಾವಣೆ, ಶಿವಮೊಗ್ಗ.
ಸೈನ್ಸ್ ಮೈದಾನ ಕ್ರೀಡೆಗೇ ಇರಲಿ
ಶಿವಮೊಗ್ಗ ಹೃದಯ ಭಾಗದಲ್ಲಿರುವ ಸೈನ್ಸ್ ಮೈದಾನವನ್ನು ಪದೇ ಪದೇ ವಾಣಿಜ್ಯ ಮತ್ತಿತರ ಚಟುವಟಿಕೆಗೆ ನೀಡಲಾಗುತ್ತಿದ್ದು, ಇದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ. ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಸುತ್ತುಮುತ್ತ ಇಷ್ಟು ದೊಡ್ಡ ಅಂಕಣ ಸಿಗುವುದಿಲ್ಲ. ಹೀಗಾಗಿ ಸೈನ್ಸ್ ಮೈದಾನವನ್ನು ಕ್ರೀಡಾ ಚಟುವಟಿಕೆಗೆ ಮೀಸಲಿಡುವ ಬಗ್ಗೆ ಸಂಬಂಧಪಟ್ಟವರು ಆಸಕ್ತಿ ವಹಿಸುವುದೊಳಿತು. ವಾಣಿಜ್ಯ ಉದ್ದೇಶಕ್ಕೆ ನಗರದ ಹೊರವಲಯದ ಮೈದಾನಗಳನ್ನು ಬಳಸಿಕೊಳ್ಳಲು ಅವಕಾಶವಿದೆ.
-ಗಜಾನನ ರವಿ, ಕೋಟೆರಸ್ತೆ.