ಹಾಸ್ಟೆಲ್ಗಳಿಗೆ ಕಾಯಕಲ್ಪ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.15
ಹಾಸ್ಟೆಲ್ಗೆ ದಿಢೀರ್ ಭೇಟಿ ಕೊಡುತ್ತೇನೆ. ಅಲ್ಲೇ ಊಟ, ವಾಸ್ತವ್ಯ ಮಾಡುತ್ತೇನೆ. ಈ ಮೂಲಕ ಹಾಸ್ಟೆಲ್ಗಳಲ್ಲಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದರು.
ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವುಗಳಿಗೆ ಕಾಯಕಲ್ಪ ಕೊಡುವ ಉದ್ದೇಶದಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ನಿಟ್ಟಿನಲ್ಲಿ ಹಾಸ್ಟೆಲ್ಗಳಿಗೆ ದಿಢೀರ್ ಭೇಟಿಕೊಡುವ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಾಕಿಕೊಳ್ಳುತ್ತೇನೆ ಎಂದು ತಿಳಿಸಿದರು.
ಅದೇ ರೀತಿ ಜಿಲ್ಲಾಧಿಕಾರಿ ಸಹ ಹಾಸ್ಟೆಲ್ಗೆ ದಿಢೀರ್ ಭೇಟಿ ಕೊಟ್ಟು ಊಟ ಮಾಡಬೇಕು. ಹೀಗೆ ಅನಿರೀಕ್ಷಿತ ಭೇಟಿಯ ಬೆದರಿಕೆಯಿಂದಲಾದರೂ ವ್ಯವಸ್ಥೆ ಸುಧಾರಣೆಯಾಗಬಹುದು. ಈ ಮೂಲಕ ಮಕ್ಕಳಿಗೂ ಉತ್ತಮ ಆಹಾರ ಸಿಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಡಿಸಿ ವಿಪುಲ್ ಬನ್ಸಲ್ ಅವರಿಗೆ ಸಲಹೆ ನೀಡಿದರು.
ಹಾಸ್ಟೆಲ್ಗಳಿಗೆ ಸರ್ಕಾರ ಸಾಕಷ್ಟು ಹಣ ಕೊಡುತ್ತದೆ. ಆದರೆ, ಅಲ್ಲೊಂದಿಷ್ಟು ದುರ್ಬಳಕೆಯಾಗುತ್ತಿದೆ. ಇದನ್ನು ಸರಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಹಾಸ್ಟೆಲ್ಗಳು ವಿದ್ಯಾಶೀಲವಾಗಬೇಕು. ಉತ್ತಮ ವಾತಾವರಣ ನಿರ್ಮಾಣ ಆಗಬೇಕೆಂಬುದು ನನ್ನ ಕಲ್ಪನೆ ಎಂದರು.
200 ಹೋಬಳಿ ಶಾಲೆ: ಕಾನ್ವೆಂಟ್ನಲ್ಲಿ ಓದಿದರೆ ಮಾತ್ರ ತಮ್ಮ ಮಗು ಉತ್ತಮ ಕೆಲಸ ಹೊಂದಲು ಸಾಧ್ಯ ಎಂಬ ಭ್ರಮೆ ಜನಸಾಮಾನ್ಯರಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದಲೂ ಹೋಬಳಿ ಮಟ್ಟದಲ್ಲಿ ವಸತಿ ಶಾಲೆ ಆರಂಭಿಸಲಾಗುತ್ತಿದೆ. 6ನೇ ತರಗತಿಯಿಂದ 10 ರವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಇರುವ ಶಾಲೆ ಅದಾಗಿರುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಇಂತಹ 200 ಹೋಬಳಿಮಟ್ಟದ ವಸತಿ ಶಾಲೆಯನ್ನು ಮಾಡುವ ಉದ್ದೇಶವಿದೆ. ಹೋಬಳಿ ಮಟ್ಟದಲ್ಲಿ 10 ಎಕರೆ ಜಾಗದಲ್ಲಿ ಸಣ್ಣದೊಂದು ವಿಶ್ವವಿದ್ಯಾಲಯ ಮಾದರಿಯಲ್ಲಿ ಶಾಲೆ ನಿರ್ಮಾಣಗೊಳ್ಳುತ್ತದೆ. ಇದರಿಂದ ಹಳ್ಳಿ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಸರ್ಕಾರದ ಕಡೆಯಿಂದಲೇ ದೊರೆಯಲಿದೆ ಎಂದರು.
ಅನೇಕ ಕಡೆ ರಾಜಕಾರಣಿಗಳೇ ಭೂಮಿಯನ್ನು ನುಂಗಿದ್ದಾರೆ. ಇದರಿಂದ ಹೋಬಳಿ ವಸತಿ ಶಾಲೆಗೆ ಸೂಕ್ತ ಜಾಗ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಶಾಲೆಗೆ ಸೂಕ್ತವಾದ ಜಾಗ ಗುರುತಿಸಬೇಕು. ಸರ್ಕಾರಿ ಜಾಗದ ಲಭ್ಯವಿಲ್ಲವಾದಲ್ಲಿ ಖಾಸಗಿ ಭೂಮಿ ಖರೀದಿಸಲು ಸೂಚಿಸಲಾಗುತ್ತದೆ ಎಂದರು.
ಅಸಮಾಧಾನವೆಲ್ಲಿ?
ಹೀಗೆಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಪತ್ರಕರ್ತರನ್ನು ಪ್ರಶ್ನಿಸಿದ ಪ್ರಸಂಗ ಸುದ್ದಿಗೋಷ್ಠಿಯಲ್ಲಿ ನಡೆಯಿತು. ಆಳುವ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕರ ಅಸಮಾಧಾನ ಕುರಿತು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ಗಂಭೀರವಾಗಿ ಉತ್ತರಿಸಿ, ಯಾವ ಶಾಸಕರು ಅಸಮಾಧಾನವಾಗಿದ್ದಾರೆ ಹೇಳಿ. ಅಸಮಾಧಾನ ಹತ್ತಿರ ಸುಳಿದಿಲ್ಲ ಎಂದರು.
6 ತಿಂಗಳಲ್ಲಿ 6 ಶಾಸಕಾಂಗ ಪಕ್ಷದ ಸಭೆ ಕರೆಯು ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಶಾಸಕಾಂಗ ಪಕ್ಷದಲ್ಲಿ ಶಾಸನ ಸಭೆಯಲ್ಲಿ ಚರ್ಚೆಗೆ ಬರುವ ಕಾಯ್ದೆಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡಲಾಗಿದೆ ಎಂದು ಹೇಳಿದರು.
ಸದಾಶಿವ ಆಯೋಗದ ವರದಿ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ನಾನಿನ್ನೂ ವರದಿ ಓದಿಲ್ಲ. ಆಯೋಗದ ವರದಿಯನ್ನು ಶಿಫಾರ್ಸನ್ನು ಜಾರಿಗೆ ತರುವ ವಿಚಾರದಲ್ಲಿ ಬೇಕು-ಬೇಡ ಎಂಬ ಭಿನ್ನ ಅಭಿಪ್ರಾಯವಿದೆ. ಹೀಗಾಗಿ, ಸರ್ಕಾರ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಿದೆ ಎಂದರು.