ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಡಕೆ ನಿಷೇಧ; ಪ್ರತಿಗೆ ಒತ್ತಾಯ

Lingaraj Badiger
Updated On : 17 Dec 2013, 10:50 am

ಶಿವಮೊಗ್ಗ: ಅಡಕೆ ನಿಷೇಧಿಸುವಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ಪದೇ ಪದೇ ಹೇಳುತ್ತಿರುವ ಬಿಜೆಪಿ ಮುಖಂಡರು ಇದನ್ನು ಸಾಬೀತುಪಡಿಸಲು ಕೂಡಲೇ ಈ ಪ್ರಮಾಣಪತ್ರದ ಪ್ರತಿ ಬಹಿರಂಗಪಡಿಸಬೇಕು ಎಂದು ಮಲೆನಾಡು ಅಡಕೆ ಬೆಳೆಗಾರರ ಸಂಘಟನೆ ಒತ್ತಾಯಿಸಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಈ ಕುರಿತು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಅಡಕೆ ಧಾರಣೆಯಲ್ಲಿ ವ್ಯತ್ಯಯ ಕಂಡುಬರುವ ಸಂಭವವಿದೆ. ಈ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ಅಡಕೆ ಬೆಳೆಗಾರರು ಅರಿಯುವ ಅವಶ್ಯಕತೆ ಇದ್ದು, ಕೂಡಲೇ ದಾಖಲೆ ಬಹಿರಂಗಪಡಿಸಬೇಕು ಎಂದು ತೀರ್ಥಹಳ್ಳಿ ಘಟಕದ ಸಂಚಾಲಕ ಬಾಳೇಹಳ್ಳಿ ರವೀಶ್ ಒತ್ತಾಯಿಸಿದ್ದಾರೆ. ಈ ಹಿಂದೆ ಪ್ರತಿ ವರ್ಷವೂ ವ್ಯಾಪಾರಿ ಹಿತಾಸಕ್ತಿ ಕಾಪಾಡುವ ಸಲುವಾಗಿ ಅಡಕೆ ಸಂಸ್ಕರಣಗೊಂಡು ಮಾರುಕಟ್ಟೆಗೆ ಬರುವ ವೇಳೆಗೆ ಗುಟ್ಕಾ ನಿಷೇಧವೆಂಬ ಗುಮ್ಮವನ್ನು ಬಿಡುತ್ತಾ ವ್ಯವಸ್ಥಿತವಾಗಿ ಅಡಕೆ ಧಾರಣೆ ಕುಸಿಯುವಂತೆ ಮಾಡಲಾಗುತ್ತಿತ್ತು. ಪ್ರಸ್ತುತ ಅಡಕೆ ನಿಷೇಧ ಕುರಿತು ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ ಎಂದು ಹೇಳಿಕೆ ನೀಡುತ್ತಾ ಕೊಳೆರೋಗ ಬಾಧೆಯಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿರುವ ಅಡಕೆ ಬೆಳೆಗಾರರು ಈ ವರ್ಷವೂ ಸಹ ಧಾರಣೆಯಲ್ಲಿ ವ್ಯತ್ಯಾಸ ಉಂಟುಮಾಡುವ ಹುನ್ನಾರ ನಡೆದಿದೆ. ಇದರಿಂದ ಅಡಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಂಭವವಿರುವುದರಿಂದ ಕೂಡಲೇ ದಾಖಲೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕ್ರೀಡಾಕೂಟ
ಶಿವಮೊಗ್ಗ: ಬಂಜಾರ (ಲಂಬಾಣಿ) ರಕ್ಷಣಾ ವೇದಿಕೆ ಡಿ.20 ರಿಂದ 22 ರವರೆಗೆ ಬಂಜಾರ ಯುವಕರಿಗಾಗಿ ಬಿ.ಎಚ್.ರಸ್ತೆಯ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಮತ್ತು ವಾಲಿಬಾಲ್ ಕ್ರೀಡಾಕೂಟ ಏರ್ಪಡಿಸಿದೆ. ಸೇವಾಲಾಲ್ ಕಪ್ ಒಳಗೊಡಂತೆ ಪ್ರಥಮ ಬಹುಮಾನ 15,101, ದ್ವಿತೀಯ 10,101 (ಕ್ರಿಕೆಟ್), ವಾಲಿಬಾಲ್ ಪ್ರಥಮ ಬಹುಮಾನ 10,101, ದ್ವಿತೀಯ ಬಹುಮಾನ 5,101 ನಿಗದಿಪಡಿಸಲಾಗಿದೆ. ಬಂಜಾರ ಯುವಕರು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ವೇದಿಕೆಯ ಜಿಲ್ಲಾಧ್ಯಕ್ಷ ಉಮಾಮಹೇಶ್ವರ ನಾಯ್ಕ್ ತಿಳಿಸಿದ್ದಾರೆ. ವಿವರಗಳಿಗಾಗಿ ಮೊ. 9886659100.
ಉಚಿತ ತಪಾಸಣೆ
ಶಿವಮೊಗ್ಗ: ನಗರದ ವಾತ್ಸಲ್ಯ ಆಸ್ಪತ್ರೆಯಲ್ಲಿ ಡಿ. 17ರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಶಸ್ತ್ರಚಿಕಿತ್ಸೆ ತೊಂದರೆಗಳ ನಿವಾರಣೆಗಾಗಿ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಹರ್ನಿಯಾ, ಸ್ತನದಲ್ಲಿ ಗಡ್ಡೆ, ಬಾವು, ಪೈಲ್ಸ್, ಫಿಶರ್ಸ್, ಅನ್ನನಾಳ ಸಮಸ್ಯೆ, ಪಿತ್ತಕೋಶದಲ್ಲಿ ಕಲ್ಲುಗಳು, ಅಪೆಂಡಿಕ್ಸ್, ಹೊಟ್ಟೆ ಮತ್ತು ಕರುಳಿಗೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಧೀರೇಂದ್ರ ಪಂಢರಿ ತಿಳಿಸಿದ್ದಾರೆ. ವಿವರಗಳಿಗಾಗಿ ದೂ. 08182- 408100.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement