ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಚ್‌ಆರ್‌ಎಂಎಸ್ ಅವಾಂತರ; ಅತಂತ್ರನಾದ ನೌಕರ

Lingaraj Badiger
Updated On : 17 Dec 2013, 10:52 am

ಶಿವಮೊಗ್ಗ: ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ವೇತನ ವ್ಯವಸ್ಥೆ ಎಚ್‌ಆರ್‌ಎಂಎಸ್(ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಶಿಕ್ಷಣ ಇಲಾಖೆಯ ಶಿವಮೊಗ್ಗದಲ್ಲಿ ಗ್ರೂಪ್ ಡಿ ನೌಕರನೊಬ್ಬನ ಬದುಕನ್ನೇ ಬೀದಿಗೆ ತಳ್ಳಿದೆ.
ತಮ್ಮ ಸಂಕಟದ ಕುರಿತು ಅಂಜುತ್ತಲೇ 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಚೇರಿಯ ನೌಕರ ಪರಮೇಶ್ವರಪ್ಪ, ಸರ್, ಮನೆ ಖಾಲಿ ಮಾಡುವಂತೆ ಮನೆ ಮಾಲೀಕ ಬೆನ್ನು ಬಿದ್ದಿದ್ದಾರೆ. ಬರುವ ಸಂಬಳದಲ್ಲಿ ಹಾಗೂ ಕುಟುಂಬ ತೂಗಿಸಿಕೊಂಡು ಹೋಗುತ್ತಿದ್ದೆ. ಮುಂದೇನು ಮಾಡುವುದು ಗೊತ್ತಾಗುತ್ತಿಲ್ಲ ಎಂದು ಭಾವುಕರಾದರು.
ಪರಿಹಾರವಾಗುತ್ತಿಲ್ಲ: ಸೆಪ್ಟೆಂಬರ್‌ನಿಂದ ಸಂಬಳವಾಗಿಲ್ಲ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ, ಬೆಂಗಳೂರಿನಲ್ಲಿರುವ ಹಿರಿಯ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಿದ್ದಾರೆ. ಆರು ಬಾರಿ ಬೆಂಗಳೂರಿಗೆ ಹೋಗಿ ಬಂದಾಗಿದೆ. ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ ಎಂದು ಸಮಸ್ಯೆ ವಿವರಿಸಿದರು.
ತಪ್ಪನ್ನು ಸರಿಪಡಿಸಲು ಬೆಂಗಳೂರಿನ ಅಧಿಕಾರಿ ವರ್ಗ ಹಿಂದೇಟು ಹಾಕುತ್ತಿರುವ ಕಾರಣ, ಬಡ ಡಿ ಗ್ರೂಪ್ ನೌಕರ ಬಾಡಿಗೆ ಮನೆಯಿಂದ ಹೊರದಬ್ಬಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ ಸಾಲ- ಸೋಲ ಮಾಡಿ ಮೂರು ತಿಂಗಳು ದಬ್ಬಿರುವ ಡಿ ಗ್ರೂಪ್ ನೌಕರ ನಾಲ್ಕನೇ ತಿಂಗಳು ಕಳೆಯಲು ಸಾಧ್ಯವಾಗದೇ ಭಾವುಕರಾಗಿದ್ದಾರೆ. ಮುಂದೇನು ಎಂದು ತಿಳಿಯದೇ ಕಂಗಾಲಾಗಿದ್ದಾರೆ.
ಮನೆ ಬಾಡಿಗೆ ಎಲ್ಲಿಂದ ಕಟ್ಟಬೇಕು, ವಿದ್ಯುತ್ ಬಿಲ್, ಪಡಿತರ ಹೇಗೆ ತರೋದು, ಯಾರ ಬಳಿ ಎಷ್ಟು ಹಣ ಸಾಲ ಮಾಡೋದು ಎಂದು ಹೇಳುವಾಗ ಅವರ ಕೈ ನಡುಗುತ್ತಿತ್ತು.
ಅಧಿಕಾರಿಗಳೇನಂತಾರೆ?: ಸಮಸ್ಯೆ ಕುರಿತಂತೆ 'ಕನ್ನಡಪ್ರಭ' ಸ್ಥಳೀಯ ಹಂತದ ಅಧಿಕಾರಿಗಳನ್ನು ಮಾತನಾಡಿಸಿದರೆ, ಅವರು ಕೊಡುವ ಉತ್ತರೇ ವಿಚಿತ್ರವೆನಿಸುತ್ತದೆ. ತಪ್ಪಾಗಿದೆ ನಿಜ, ತಪ್ಪು ತಿದ್ದುವ ಅವಕಾಶ, ಅಧಿಕಾರ ನಮಗೆ ಕೊಟ್ಟಿಲ್ಲ. ಸಮಸ್ಯೆ ಅನುಭವಿಸುವ ಸಿಬ್ಬಂದಿ ನೇರವಾಗಿ ಬೆಂಗಳೂರಿಗೆ ಹೋಗಿ ಸರಿಮಾಡಿಸಿಕೊಂಡು ಬರಬೇಕು. ಇಲ್ಲವಾದರೆ ವೇತನ ಆಗುವುದಿಲ್ಲ ಎಂದು ವಿವರಿಸುತ್ತಾರೆ. ಪರಮೇಶ್ವರಪ್ಪ ಪ್ರಕರಣದಲ್ಲಿ ಆರು ಬಾರಿ ಬೆಂಗಳೂರಿಗೆ ಹೋಗಿ ಮನವಿ ಕೊಟ್ಟು ಬಂದಾಗಿದೆ. ಇನ್ನೇನು ಮಾಡಬೇಕೆಂದು ಪ್ರಶ್ನಿಸಿದರೆ, ನಮ್ಮದೇನು ಪಾತ್ರವಿಲ್ಲ. ನಮಗೇನು ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ.

ಏನಿದು ಸಮಸ್ಯೆ?

 ಪರಮೇಶ್ವರಪ್ಪ ಸೇವೆಗೆ ಸೇರಿ 30 ವರ್ಷ ಕಳೆದಿದೆ. ಇನ್ನೊಂದು ವರ್ಷ ಮಾತ್ರ ಸೇವೆ ಬಾಕಿ ಇದೆ. ಎಸ್ಸೆಸ್ಸೆಲ್ಸಿ ಓದಿರದ ಕಾರಣ ಅವರಿಗೆ ಈ ವರೆಗೆ ಯಾವುದೇ ಬಡ್ತಿ ಸಿಕ್ಕಿಲ್ಲ. ಆದರೆ, ಸರ್ಕಾರದ ನಿಯಮದಂತೆ 25 ವರ್ಷ ಸೇವೆ ಸಲ್ಲಿಸಿರುವ ಕಾರಣ ಹೆಚ್ಚುವರಿ ವೇತನ ಬಡ್ತಿ ಅವರಿಗೆ ಸಿಕ್ಕಿದೆ.
ಹೊಸ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಂತೆ ಈ ವಿಷಯವನ್ನು ಸಾಫ್ಟ್‌ವೇರ್‌ನಲ್ಲಿ ನಮೂದು ಮಾಡಬೇಕಾಗಿದೆ. ಹೀಗೆ ನಮೂದಾಗುವ ಸಂದರ್ಭದಲ್ಲಿ ಸ್ಥಳೀಯ ಕೇಸ್ ವರ್ಕರ್ ತಪ್ಪಾಗಿ ನಮೂದಿಸಿದ್ದಾರೆ.
ಸರಿಯಾದ ಕಲಂನಲ್ಲಿ ನಮೂದಿಸದ ಪರಿಣಾಮ ವೇತನ ಪಾವತಿಯಾಗುತ್ತಿಲ್ಲ.
ಈ ಸಮಸ್ಯೆಯನ್ನು ಪರಿಹರಿಸಲು ಶಿವಮೊಗ್ಗದ ಶಿಕ್ಷಣ ಇಲಾಖೆಯಲ್ಲಿ ಅವಕಾಶವಿಲ್ಲ.
ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಬೇಕು. ಅವರ ಶಿಫಾರಸ್ಸಿನ ಆಧಾರದಲ್ಲಿ ಸಾಫ್ಟ್‌ವೇರ್‌ನಲ್ಲಾದ ತಪ್ಪನ್ನು ಸರಿಪಡಿಸಬೇಕು.

ಸಿಬ್ಬಂದಿ ಅಸಮಾಧಾನ

ಸಮಸ್ಯೆ ಎಂದರೆ ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಆದರೆ, ಎಚ್‌ಆರ್‌ಎಂಎಸ್ ವ್ಯವಸ್ಥೆಯ ವಿಚಾರದಲ್ಲಿ ಶಿಕ್ಷಣ ಇಲಾಖೆ ಗಂಭೀರ ಸಮಸ್ಯೆ ಎದುರಿಸುತ್ತಿದೆ ಎಂಬುದು ಶಿಕ್ಷಣ ಇಲಾಖೆ ಸಿಬ್ಬಂದಿಯ ಅಳಲು.
ಶಿಕ್ಷಕರಿಗೆ, ಸಿಬ್ಬಂದಿಗೆ ವಿಶೇಷವಾಗಿ ಅನೇಕ ಭತ್ಯೆ ಬರುತ್ತವೆ. ಇವುಗಳನ್ನು ನಮೂದಿಸುವ ಕಾರ್ಯ ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಶಿಕ್ಷಕರಿಗೆ ಸಲ್ಲಬೇಕಾದ ಅನೇಕ ಭತ್ಯೆ, ಅರಿಯರ್ಸ್‌ಗಳು ಸಿಗದಂತಾಗಿವೆ. ಇದನ್ನು ಬಗೆಹರಿಸಬೇಕಾದವರು ಉದಾಸೀನ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಎಚ್‌ಆರ್‌ಎಂಎಸ್ ವ್ಯವಸ್ಥೆ ನಡುವಿನ ಸಂವಹನ ಕೊರತೆಯಿಂದಾಗಿ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯಾದ್ಯಂತ ಈ ಸಮಸ್ಯೆ ಇದೆ ಎಂದವರು ವಿವರಿಸುತ್ತಾರೆ. ಶಿಕ್ಷಣ ಇಲಾಖೆಯಲ್ಲಿರುವ ಎಚ್‌ಆರ್‌ಎಂಎಸ್ ನೋಡಲ್ ಅಧಿಕಾರಿಯವರು ದೂರವಾಣಿ ಕರೆಯನ್ನೇ ಸ್ವೀಕರಿಸುವುದಿಲ್ಲ. ಇದರಿಂದ ಸೌಲಭ್ಯವಂಚಿತರು ತೀವ್ರ ಅಸಮಾಧಾಗೊಂಡಿದ್ದಾರೆ ಎಂದು ಶಿವಮೊಗ್ಗ ಶಿಕ್ಷಣ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement