ದಲಿತ ಕುಟುಂಬಕ್ಕೆ ಬಹಿಷ್ಕಾರ: ಖಂಡನೆ
ಶಿವಮೊಗ್ಗ: ಬಾಗಲಕೋಟೆ ಜಿಲ್ಲೆ ಜಮಖಂಡಿಯ ಗದ್ಯಾಳ್ ಗ್ರಾಮದಲ್ಲಿ ದಲಿತ ಕುಟುಂಬಗಳನ್ನು ಸಾಮಾಜಿಕ ಬಹಿಷ್ಕಾರ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಯುವ ಸೇನೆ ಸೋಮವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರಿಗೆ ಮನವಿ ನೀಡಿದೆ.
ಗದ್ಯಾಳ್ ಗ್ರಾಮದಲ್ಲಿ ಸುಮಾರು 50 ಕುಟುಂಬಗಳ ಮೇಲೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಇದರಿಂದ ಆ ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ದಶಕಗಳು ಕಳೆದರೂ ಇಂದಿಗೂ ಸಾಮಾಜಿಕ ಬಹಿಷ್ಕಾರದಂತಹ ಪದ್ಧತಿಗಳು ಜಾರಿಯಲ್ಲಿರುವುದು ನಿಜಕ್ಕೂ ನಾಗರಿಕ ಸಮಾಜ ತಲ್ಲೆತಗ್ಗಿಸುವಂತಹದ್ದು ಎಂದು ಸೇನೆ ಮನವಿಯಲ್ಲಿ ಆರೋಪಿಸಿದೆ.
ಅಂಬೇಡ್ಕರ್ ಹಲವು ದಶಕಗಳಿಂದ ತುಳಿಕ್ಕೊಳಗಾದ ದಲಿತ ಸಮುದಾಯಕ್ಕೆ ನ್ಯಾಯ ಕಲ್ಪಿಸಲು ಅವಿರತ ಹೋರಾಟ ನಡೆಸಿದ್ದರು. ಆದರೆ, ಗದ್ಯಾಳ್ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ದೊಡ್ಡ ಅಪರಾಧ.
ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಗ್ರಾಮಕ್ಕೆ ಇಲ್ಲಿಯವರಿಗೆ ಸ್ಥಳೀಯ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸೇನೆ ಮನವಿಯಲ್ಲಿ ದೂರಿದೆ.
ಬಹಿಷ್ಕಾರಕ್ಕೊಳಗಾದ ದಲಿತ ಸಮುದಾಯಕ್ಕೆ ಜಿಲ್ಲಾಧಿಕಾರಿಗಳಾಗಲಿ, ಜಿಲ್ಲಾ ರಕ್ಷಣಾಧಿಕಾರಿಗಳಾಗಲಿ, ಉಪವಿಭಾಗಧಿಕಾರಿಗಳಾಗಲಿ ಭೇಟಿ ನೀಡಿ ದಲಿತರ ಅಹವಾಲು ಆಲಿಸುವ ಕೆಲಸ ಮಾಡಿಲ್ಲ.
ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಳೆಯಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಸೇನೆ ಮನವಿಯಲ್ಲಿ ಒತ್ತಾಯಿಸಿದೆ.
ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದ್ಯಾಳ್ ಗ್ರಾಮಕ್ಕೆ ಭೇಟಿ ನೀಡಬೇಕು, ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾದ ದಲಿತರ ಅಹವಾಲು ಆಲಿಸಬೇಕು, ಅವರ ನೆರವಿಗೆ ಧಾವಿಸಬೇಕು. ಸವರ್ಣೀಯರ ವಿರುದ್ಧ ಜಾತಿ ನಿಂದನೆಯಡಿ ಪ್ರಕರಣ ದಾಖಲು ಮಾಡಿ ಗಡಿಪಾರು ಮಾಡಬೇಕು ಎಂದು ಸೇನೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಈ ವೇಳೆ ಸೇನೆಯ ರಾಜ್ಯಾಧ್ಯಕ್ಷ ಎನ್. ರಾಮು, ಕಾರ್ಯಾಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ, ಶಿವಕುಮಾರ್, ಮನೋಹರ ಮತ್ತಿತರರು ಇದ್ದರು.