ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಸಿಯೂಟಕ್ಕೆ ಚಪಾತಿ ಕಡ್ಡಾಯವಲ್ಲ

Lingaraj Badiger
Updated On : 17 Dec 2013, 10:54 am

ಕ.ಪ್ರ. ವಾರ್ತೆ, ಶಿವಮೊಗ್ಗ, ಡಿ.16
ಶಾಲಾ ಮಕ್ಕಳ ಬಿಸಿಯೂಟಕ್ಕೆ ಚಪಾತಿ ಮಾಡುವುದು ಕಡ್ಡಾಯವೇನಲ್ಲ. ಜಿಲ್ಲಾಧಿಕಾರಿಯವರು ಈ ರೀತಿ ಹೇಳಿದ್ದಾರಷ್ಟೇ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ವಿಷಯ ತಿಳಿಸಿದರು.
ಚಪಾತಿ ಮಾಡುವುದು ಕಷ್ಟದ ಕೆಲಸ. ಒಬ್ಬಿಬ್ಬರು ಬಿಸಿಯೂಟ ತಯಾರಕರು ಎಲ್ಲಾ ಮಕ್ಕಳಿಗೆ ಚಪಾತಿ ಮಾಡುವುದು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳ ಹಿನ್ನೆಲೆಯಲ್ಲಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಅವರು ಈ ಕುರಿತು ಡಿಡಿಪಿಐ ಅವರನ್ನು ಪ್ರಶ್ನಿಸಿದಾಗ, ಬಿಸಿಯೂಟ ಪಡಿತರ ಜತೆಗೆ ಗೋದಿಯನ್ನೂ ನೀಡಲಾಗುತ್ತಿದೆ. ಆದರೆ, ಚಪಾತಿಯನ್ನೇ ಮಾಡಬೇಕು ಎಂದೇನೂ ಇಲ್ಲ. ಉಪ್ಪಿಟ್ಟು ಅಥವಾ ಗೋದಿ ಪಾಯಸವನ್ನೂ ಮಾಡಬಹುದು ಎಂದರು.
ಚಪಾತಿ ಮಾಡುವಂತೆ ಹೇಳಿದ್ದು ಜಿಲ್ಲಾಧಿಕಾರಿಯವರೇ ಎಂದು ಅವರು ಸೇರಿಸಿದರು.
ಸೈಕಲ್ ಕಿಟ್: ಶಾಲಾ ಮಕ್ಕಳಿಗೆ ಸೈಕಲ್ ಕೊಡುವುದಲ್ಲದೇ ರಾಜ್ಯ ಸರ್ಕಾರವು ಒಂದು ಟೂಲ್ ಕಿಟ್ ಶಾಲೆಗೆ ನೀಡುತ್ತಿದೆ. ಇದರ ಜವಾಬ್ದಾರಿ ದೈಹಿಕ ಶಿಕ್ಷಣ ಶಿಕ್ಷಕರದ್ದು ಎಂದು ಡಿಡಿಪಿಐ ಹೇಳಿದರು. ಈ ಬಾರಿ ಸೈಕಲ್ ಬಣ್ಣ ಬದಲಿಸಲಾಗಿದೆ. ಎರಡು ಬಣ್ಣದಲ್ಲಿ ಸೈಕಲ್ ನೀಡಲಾಗುತ್ತಿದೆ ಎಂದು ಡಿಡಿಪಿಐ ಬಸವರಾಜಪ್ಪ ಹೇಳಿದರು.
ಶಿರಾಳಕೊಪ್ಪದ ಬಾಲಕಿಯ ಸರ್ಕಾರಿ ಶಾಲೆ ಕಟ್ಟಡ ಹಾಳಾಗಿದೆ. ಈ ಬಗ್ಗೆ ಏಕೆ ಗಮನಿಸುತ್ತಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ದಾನೇರ ರುದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದಾಗ, ಈ ಶಾಲೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಡಿಎಚ್‌ಒ ತರಾಟೆಗೆ: ಅರಳಸುರಳಿ ಗ್ರಾಪಂ ವ್ಯಾಪ್ತಿಯ ಬಂಡ್ಯಾ ಗ್ರಾಮದ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಸ್ಥಳ ಭೇಟಿ ನೀಡುವಂತೆ ಸೂಚಿಸಿದ್ದರೂ ಡಿಎಚ್‌ಒ ಶಿವಣ್ಣ ರೆಡ್ಡಿ ಅವರು ಕ್ರಮ ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಯಿತು.
ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗಳಿಂದ ವರದಿ ಪಡೆದಿದ್ದೇನೆ. ಕಟ್ಟಡ ಕಳಪೆಯಾಗಿದೆ ಎಂದು ಡಿಎಚ್‌ಒ ಅವರು ಸಮಜಾಯಿಷಿ ನೀಡಿದರೂ ಸುಮ್ಮನಿರದ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಹೇಮಾ ಪಾವನಿ, ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ, ಸಹಜ ಹೆರಿಗೆ ಸಾಧ್ಯವಿದ್ದ ಗರ್ಭಿಣಿಯೊಬ್ಬರನ್ನು ಶಿವಮೊಗ್ಗ- ತೀರ್ಥಹಳ್ಳಿ ಆಸ್ಪತ್ರೆಗಳ ನಡುವೆ ಓಡಾಡಿಸಿ ತೊಂದರೆ ಮಾಡಿದ್ದಾರೆ ಎಂದರು. ಗಾಯತ್ರಿ ಷಣ್ಮುಖಪ್ಪ ಸಹ ದನಿಗೂಡಿಸಿದರು.

ಶಿಕ್ಷಕಿ ಮೇಲೆ ಮುಖ್ಯ ಶಿಕ್ಷಕ ಹಲ್ಲೆ

ತೀರ್ಥಹಳ್ಳಿ ತಾಲೂಕು ಕೋಣಂದೂರಿನ ಮಕ್ಕಿಬೈಲು ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಅದೇ ಶಾಲೆಯ ಶಿಕ್ಷಕಿಯೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿದ್ದು ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷ ದಾನೇರ ರುದ್ರಪ್ಪ ಅವರು ವಿಷಯ ಪ್ರಸ್ತಾಪಿಸಿ, ಶಾಲಾ ಮಕ್ಕಳ ಎದುರಿನಲ್ಲೇ ಈ ರೀತಿಯ ಘಟನೆಗಳು ನಡೆದರೆ ಹೇಗೆ ಎಂದು ಪ್ರಶ್ನಿಸಿದರು. ಮುಖ್ಯ ಶಿಕ್ಷಕರ ವಿರುದ್ಧ ಹಲವು ದೂರುಗಳಿದ್ದು, ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಳಿದರು.
ಆಗ ಡಿಡಿಪಿಐ ಬಸವರಾಜಪ್ಪ, ಶಾಲೆಗೆ ಭೇಟಿ ನೀಡಿ ತನಿಖೆ ನಡೆಸುತ್ತೇನೆ ಎಂದು ಹೇಳಿದ ನಂತರ ಚರ್ಚೆಗೆ ತೆರೆ ಬಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement