ಮಕ್ಕಳ ಭವಿಷ್ಯ ಆಸಕ್ತಿಗನುಣವಾಗಿರಲಿ
ಕ.ಪ್ರ.ವಾರ್ತೆ, ಸೊರಬ, ಡಿ.16
ಮಕ್ಕಳ ಭವಿಷ್ಯ ಅವರ ಆಸಕ್ತಿಗೆ ಅನುಗುಣವಾಗಿ ನಿರ್ಧಾರವಾಗಬೇಕೇ ಹೊರತು, ಪೋಷಕರ ಪ್ರತಿಷ್ಠೆಯ ಪ್ರಶ್ನೆಯಾಗಬಾರದು ಎಂದು ಬೆಂಗಳೂರು ಇನ್ಫೋಸಿಸ್ ಸಂಸ್ಥೆಯ ಹಿರಿಯ ಎಂಜಿನಿಯರ್ ಎ.ಆರ್.ಹಿತೇಶ್ ತಿಳಿಸಿದರು.
ತಾಲೂಕಿನ ಆನವಟ್ಟಿಯಲ್ಲಿ ತಾಲೂಕು ಯುವಜನ ಸಂಘ, ಇನ್ಫೋಸಿಸ್ ಸಂಸ್ಥೆ, ಬೆಂಗಳೂರು ರೋಟರಿ ಸಿಟಿ ಸೆಂಟರ್ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್ ವಿತರಣೆ ಹಾಗೂ ಯುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸವಲತ್ತು ಅಗತ್ಯ: ಮಕ್ಕಳ ಆಸಕ್ತಿ, ಭವಿಷ್ಯಕ್ಕೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಅಂಗೈಲಿ ಬ್ರಹ್ಮಾಂಡ ಆಗಿರುವ ಕಂಪ್ಯೂಟರ್ ಜ್ಞಾನ ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ಸಂಸ್ಥೆ ಗ್ರಾಮೀಣ ಸ್ಪಂದನ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳಿಗೆ ಕಂಪ್ಯೂಟರ್ ವಿತರಿಸಲಾಗುತ್ತಿದೆ ಎಂದ ಅವರು, ಜ್ಞಾನ ನೀಡುವ ಶಿಕ್ಷಣ ನಮಗೆ ಬೇಕು. ವಿದ್ಯೆಯೊಂದಿಗೆ ಸಂಸ್ಕೃತಿ, ಉತ್ತಮ ಗುಣಗಳನ್ನು ಹಂಚಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯುವಜನ ಸಂಘದ ಸಂಸ್ಥಾಪಕ ಎಂ.ಎಸ್. ಕಾರ್ತಿಕ್, ಇನ್ಫೋಸಿಸ್ ಸಂಸ್ಥೆ ನೆರವಿನಿಂದ ತಾಲೂಕಿನ 8,000 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 120 ಕಂಪ್ಯೂಟರ್‌ಗಳನ್ನು 50 ಶಾಲೆಗಳಿಗೆ ನೀಡಲಾಗುತ್ತಿದೆ. ನೆರವಿನ ಸಂಪೂರ್ಣ ಪ್ರಯೋಜನ ಮಕ್ಕಳಿಗೆ ದೊರಕಲು ಶಿಕ್ಷಕವರ್ಗ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಬ್ಲ್ಯೂ ಡೈಮಂಡ್ ಡ್ಯಾನ್ಸ್ ಮತ್ತು ಕಲ್ಚರ್ ಅಕಾಡೆಮಿಯವರಿಂದ ನೃತ್ಯ ಕಾರ್ಯಕ್ರಮ ಹಾಗೂ ಎನ್.ಟಿ. ಸಂತೋಷ್ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ರೋಟರಿ ಸಂಸ್ಥೆ ಅಧ್ಯಕ್ಷ ನಾಗೇಶ್ವರಿ ಪೂಜಾರ್ ಅಧ್ಯಕ್ಷತೆ ವಹಿಸಿದ್ದರು.
ಇನ್ಫೋಸಿಸ್ ಸಂಸ್ಥೆಯ ಶ್ರೀನಿವಾಸ್, ಡಿ.ವಿ. ವರುಣ್, ನಾಗೇಶ್ ಕಾರಂಡೆ, ಜಿತೇಶ್ ಪಟೇಲ್, ರೋಟರಿ ಸಂಸ್ಥೆಯ ಸುರೇಶ್ ಬಾಬು, ರಮೇಶ್ ಬಾಬು, ಶ್ರೀನಿವಾಸ್ ಪ್ರಸಾದ್, ನಾಗರಾಜ್, ಶ್ರೀನಿವಾಸನ್, ಶಿಕ್ಷಣ ಸಂಯೋಜಕ ದಯಾನಂದ್ ಕಲ್ಲೇರಾ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸಂಪತ್‌ಕುಮಾರ್, ಸಂಘದ ವಿವಿಧ ಶಾಖೆಗಳ ಸದಸ್ಯರು ಹಾಜರಿದ್ದರು.
ನೇಹಲ್, ಸೇಜಲ್ ಪ್ರಾರ್ಥಿಸಿದರು. ಶರತ್ ಸ್ವಾಗತಿಸಿದರು. ಅಮರ್ ಪಾಟೀಲ್ ವಂದಿಸಿದರು. ಸಂತೋಷ್ ಆರ್. ಹಂಚಿ ನಿರೂಪಿಸಿದರು.