ಸುಕ್ಷಿತರಲ್ಲೇ ಮೌಢ್ಯ ಹೆಚ್ಚು
ಸಾಗರ: ಕಾಲ ನಮಗೋಸ್ಕರ ಕಾಯುವುದಿಲ್ಲ. ಕಾಲದ ಬೆನ್ನು ಹತ್ತಿ ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆ ಬೆಳವಣಿಗೆಯಲ್ಲ: ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ನಮ್ಮ ನಡುವಿನ ಕೆಲವು ಆಚರಣೆಗಳು ತಂತ್ರಜ್ಞಾನವನ್ನು ಮೀರಿ ವ್ಯಾಪಿಸಿಕೊಳ್ಳುತ್ತಿದೆ. ಶಿಕ್ಷಣ ಮೂಢನಂಬಿಕೆ, ಅಂಧಶ್ರದ್ಧೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ಆದರೆ ಪ್ರಸ್ತುತ ಶಿಕ್ಷಿತ ವರ್ಗವೇ ಮೂಢನಂಬಿಕೆಗೆ ಹೆಚ್ಚು ಅಂಟಿಕೊಳ್ಳುತ್ತಿರುವುದು, ಭಯೋತ್ಪಾದನೆಯಂತಹ ಸಮಾಜವನ್ನು ಒಡೆಯುವ ಕೆಲಸದಲ್ಲಿ ಭಾಗಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಶಾಲಾ- ಕಾಲೇಜು ಭವಿಷ್ಯ ನಿರ್ಮಾಣ ಮಾಡುವ ಪ್ರಜೆಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆಗಳಿದ್ದಂತೆ. ತಂದೆ- ತಾಯಿಗಿಂತ ಹತ್ತರಷ್ಟು ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಶಿಕ್ಷಕರು ಭವಿಷ್ಯ ನಿರ್ಧಾರ ಮಾಡುವ ಜ್ಯೋತಿಷಿಗಳಿದ್ದಂತೆ. ಮಕ್ಕಳು ನಿಮ್ಮ ಮೇಲೆ ಭರವಸೆ ಇರಿಸಿಕೊಂಡಿರುತ್ತಾರೆ. ನಿಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ ಮಕ್ಕಳಲ್ಲಿ ಓದಿನೊಂದಿಗೆ ಸಾಂಸ್ಕೃತಿಕ ಅರಿವು ಬೆಳೆಸಿದಾಗ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಸಾಧ್ಯ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ಇರುವ ವ್ಯವಸ್ಥೆಯನ್ನು ಸದ್ಭಳಕೆ ಮಾಡಿಕೊಂಡು ನಮ್ಮ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವ ಚಿಂತನೆ ಮಕ್ಕಳಲ್ಲಿ ಬೆಳೆಸಬೇಕು. ನಮ್ಮ ನಮ್ಮ ಕ್ಷೇತ್ರದಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ದೇಶ ಸರ್ವಾಂಗೀಣ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷ ಹರೀಶ್ ಗಂಟೆ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಟಿ. ಸಿದ್ದಪ್ಪ ಹಾಜರಿದ್ದರು.
ಗುಣಮಟ್ಟದ ಕಾಮಗಾರಿ ನಿರ್ವಹಿಸಿ
ಹೊಸನಗರ: ಜನತೆಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಕಾಮಗಾರಿಗಳಲ್ಲಿ ಉತ್ತಮ ಗುಣಮಟ್ಟವಿರಲಿ ಎಂದು ವಿಧಾನಸಭಾ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೂಚಿಸಿದರು.
ಜಿಪಂ ಶಿವಮೊಗ್ಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ತಾಪಂ ಹೊಸನಗರ, ಎಂ. ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಡೆ ಕಿರುನೀರು ಸರಬರಾಜು ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿದರು.
ಗಂಗನಕೊಪ್ಪ ಗ್ರಾಮದಲ್ಲಿ 7 ಲಕ್ಷ, ಧರೆಗಿಂಬ ಗ್ರಾಮದಲ್ಲಿ 6 ಲಕ್ಷ, ಗುಳ್ಳೇಕೊಪ್ಪ ಗ್ರಾಮದಲ್ಲಿ 6 ಲಕ್ಷ ವೆಚ್ಚದ ಕಿರುನೀರು ಸರಬರಾಜು ಯೋಜನೆ ಕಾಮಗಾರಿಗೆ ಕಾಗೋಡು ಚಾಲನೆ ನೀಡಿ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಗ್ರಾಮಗಳನ್ನು ಗುರುತು ಮಾಡಿ ಅಗತ್ಯ ಸೌಲಭ್ಯ ನೀಡಲು ಮುಂದಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ರಾಜು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ, ಗ್ರಾಪಂ ಉಪಾಧ್ಯಕ್ಷ ರಮೇಶ್, ಸದಸ್ಯರಾದ ಉಮೇಶ್, ಪಪಂ ಸದಸ್ಯ ಹಾಲಗದ್ದೆ ಉಮೇಶ್, ಬಗರಹುಕುಂ ಸಮಿತಿ ಅಧ್ಯಕ್ಷ ಏರಿಗೆ ಉಮೇಶ್, ಪ್ರಮುಖರಾದ ಪಟೇಲ್ ಗರುಡಪ್ಪಗೌಡ, ಕೋಡೂರು ಚಂದ್ರಮೌಳಿ ಜಿಪಂ ಎಇಇ ಮಂಜುನಾಥ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.