ಕಳಪೆ ಬತ್ತವೆಂದು ಖರೀದಿ ನಿರಾಕರಣೆ: ಆತಂಕದಲ್ಲಿ ರೈತರು
ಶಿರಾಳಕೊಪ್ಪ: ಅಮ್ಮಾನ್‌ಸೋನ ತಳಿಯ ಬತ್ತ ಮಾರಲು ಹೋದಾಗ ಕಳಪೆ ಇದೆ, ಈ ಬತ್ತವನ್ನು ಖರೀದಿ ಮಾಡುವದಿಲ್ಲವೆಂದು ಹೇಳಿ ಖರೀದಿಸದೆ ನಿರಾಕರಿಸಿದ ಘಟನೆ ಶಿರಾಳಕೊಪ್ಪ ಹತ್ತಿರದ ಉಡಗಣಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಉಡಗಣಿ ಗ್ರಾಮದಲ್ಲಿ ವ್ಯಾಪಾರಿಯೊಬ್ಬರಿಗೆ ಬತ್ತ ಬೆಳೆದ ರೈತ ಮಹಮದ್ ಅದನ್ನು ಮಾರಲು ಹೋದಾಗ, ಈ ಬತ್ತ ಅಮ್ಮಾನ್‌ಸೋನ ಬತ್ತವಲ್ಲ. ಇತ್ತ ಜೆಜೆಎಲ್ ಬತ್ತವೂ ಅಲ್ಲ. ಅಲ್ಲದೆ ಕಳಪೆ ಆಗಿದೆ. ಹಾಗೆಯೇ ತುಂಡು ಆಗುತ್ತಿದೆ. ಇದನ್ನು ತೆಗೆದುಕೊಳ್ಳುವದಿಲ್ಲ ಎಂದಿದ್ದಾನೆ.
ಈ ರೀತಿ ಖರೀದಿದಾರರು ಕಳಪೆಯಿದೆ, ಕೊಳ್ಳುವುದಿಲ್ಲ ಎಂದರೆ ನಾವು ಬಡವರು ಏನು ಮಾಡಬೇಕು ಎಂಬುದು ರೈತನ ಪ್ರಶ್ನೆ.
ತನಿಖೆಗೆ ಆಗ್ರಹ: ಜಿಲ್ಲಾ ಕಾಂಗ್ರೆಸ್ ಮುಖಂಡ ತೀನಾ ಶ್ರೀನಿವಾಸ ಮಾತನಾಡಿ, ವ್ಯಾಪಾರಿಗಳು ಕಳಪೆ ಬೀಜ ಕೊಟ್ಟರೆ ರೈತರು ಏನು ಮಾಡಬೇಕು, ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಗಮನಹರಿಸಿ ಶಿಕಾರಿಪುರ ತಾಲೂಕಿಗೆ ಬೀಜ ವಿತರಣೆ ಮಾಡಿದ ಜಿಲ್ಲಾ ವಿತರಕರನ್ನು ತಕ್ಷಣ ಕರೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಉಡಗಣಿ- ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿ ಕಾರ್ಯದರ್ಶಿ ಕೊಟ್ರೇಶ್, ನಯೀಮ್ ಪಾಷಾ, ಮಾಲತೇಶ್, ಶಿವಲಿಂಗಪ್ಪ, ಮಹದೇವಪ್ಪ ಪೂಜಾರ್, ಟಿ. ಯೋಗೇಶಪ್ಪ ಇತರರು ಇದ್ದರು.