ಗೋಡೆ ಕೊರೆದು ಆಭರಣ ಕಳವು
ಶಿವಮೊಗ್ಗ: ನಗರದ ಬಿಎಚ್ ರಸ್ತೆಯಲ್ಲಿರುವ ಶುಭ್ ಜ್ಯೂವೆಲರ್ಸ್‌ನ ಕಟ್ಟಡದ ಗೋಡೆ ಕೊರೆದು ಆಭರಣಗಳನ್ನು ಕಳವು ಮಾಡಿರುವ ಪ್ರಸಂಗ ಮಂಗಳವಾರ ಮುಂಜಾನೆ ವೇಳೆ ನಡೆದಿದೆ.
ಜ್ಯೂವೆಲರ್ಸ್ ಮಳಿಗೆಯ ಲಾಕರ್‌ಗಳಲ್ಲಿ ಆಭರಣಗಳನ್ನು ಇಟ್ಟಿದ್ದರಿಂದಾಗಿ ಆಭರಣಗಳನ್ನು ಕಳ್ಳತನ ಮಾಡುವ ಉದ್ದೇಶ ಈಡೇರಿಲ್ಲ. ಮಳಿಗೆ ಸಿಬ್ಬಂದಿ ಬೆಳಗ್ಗೆ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ಸುಮಾರು 10 ಗ್ರಾಂ. ಚಿನ್ನಾಭರಣ ಹಾಗೂ 25 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ. ಅಲ್ಲಿದ್ದ ಸೇಫ್ಟಿ ಲಾಕರ್‌ಗಳನ್ನು ಒಡೆಯುವ ಪ್ರಯತ್ನ ನಡೆಸಿದ್ದಾರಾದರೂ ಫಲಪ್ರದವಾಗಿಲ್ಲ. ಶುಭ್ ಜ್ಯೂವೆಲರ್ಸ್ ಎದುರಿನಲ್ಲಿ ನಗರಸಭಾ ಕಚೇರಿ ಇದ್ದು, ಅಲ್ಲಿನ ಶೌಚಾಲಯದ ಸರಳು ಮುರಿದು ಪ್ರವೇಶಿಸಿ ನಂತರ ಯಂತ್ರದ ಸಹಾಯದಿಂದ ಎರಡು ಅಡಿಯಷ್ಟು ಅಗಲವಾಗಿ ಆಭರಣದಂಗಡಿಯ ಗೋಡೆ ಕೊರೆದಿದ್ದಾರೆ.
ಕಳ್ಳತನದ ದೃಶ್ಯಾವಳಿಗಳು ಅಂಗಡಿಯಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೋಟೆ ಠಾಣೆ ಸಿಪಿಐ ಜಯರಾಜ್ ಮತ್ತವರ ಸಿಬ್ಬಂದಿ ಹಾಗೂ ಶ್ವಾನದಳ- ಬೆರಳಚ್ಚು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.