ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಕ್ಷ ಬಯಸಿದರೆ ಕುಟುಂಬದ ಸದಸ್ಯರ ಸ್ಪರ್ಧೆ

Lingaraj Badiger
Updated On : 18 Dec 2013, 10:53 am

ಶಿವಮೊಗ್ಗ: ಬಂಗಾರಪ್ಪ ಅವರ ಹೆಸರು ಉಪಯೋಗಿಸುವವರಿಗೆ ಅರ್ಹತೆ ಬೇಕು ಎಂದು ವಿರೋಧಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ಮಾರ್ಮಿಕವಾಗಿ ಹೇಳಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದವರೇ ಸ್ಪರ್ಧಿಸಬೇಕೆಂದು ಪಕ್ಷ ಬಯಸಿದರೆ ಅದಕ್ಕೆ ಸಿದ್ಧ ಎಂದು ಹೇಳಿದ್ದಾರೆ.
 ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ಪಕ್ಷವು ಶಾಸಕಿ ಶಾರದಾ ಪೂರ್ಯಾನಾಯ್ಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಲ್ತಾನ ಬೇಗಂ, ರಾಜ್ಯ ಕಾರ್ಯದರ್ಶಿ ಆನಂದ್ ಅವರ ಉಸ್ತುವಾರಿಗೆ ಬಿಟ್ಟಿದೆ. ಚುನಾವಣೆಗಿಂತ ಬಹು ಮುಂಚೆ ಅಭ್ಯರ್ಥಿಗಳ ಘೋಷಣೆ ಮಾಡುವ ನಿರೀಕ್ಷೆ ಇದೆ. ತಮ್ಮ ಅಥವಾ ತಮ್ಮ ಕುಟಂಬದವರ ಸ್ಪರ್ಧೆ ವರಿಷ್ಠರು ಹಾಗೂ ಕಾರ್ಯಕರ್ತರ ತೀರ್ಮಾನದ ಮೇಲೆ ನಿಂತಿದೆ ಎಂದರು.
ಕಿಮ್ಮನೆ ವಿರುದ್ಧ ಟೀಕೆ: ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ವಿರುದ್ಧ ಹರಿಹಾಯ್ದ ಅವರು, ಕಿಮ್ಮನೆ ರತ್ನಾಕರ್ ಅವರು ಬಂಗಾರಪ್ಪ ಅವರು ಚುನಾವಣೆ ನಿಂತಿದ್ದಾಗ ತಮ್ಮ ಕ್ಷೇತ್ರದಿಂದ 6 ಸಾವಿರ ಲೀಡ್ ಕೊಡಿಸಿದ್ದೆ ಎಂದಿದ್ದರು. ಅವರೇ ಸ್ಪರ್ಧಿಸಿದಾಗ ಈ ಲೀಡ್ 1 ಸಾವಿರಕ್ಕೆ ಇಳಿಯಿತು. ಹಾಗಾಗಿಯೇ ಇವರು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ ಎಂದರು.
 ಸೊರಬ ಚುನಾವಣೆಯಲ್ಲಿ ಮೂರನೇ ಸ್ಥಾನ ಪಡೆದ ಕುಮಾರ್ ಬಂಗಾರಪ್ಪರಿಗೆ ಬಂಗಾರಪ್ಪ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದರು.
 ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಅಡಕೆ ನಿಷೇಧಿಸುವ ಪ್ರಸ್ತಾವ ಬಂದರೆ ಜಿಲ್ಲೆಯಿಂದಲೇ ಹೋರಾಟ ಆರಂಭಿಸುವುದಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.
ರೈತರಿಂದಲೇ ಖರೀದಿಸಿ: ರಾಜ್ಯ ಸರ್ಕಾರವು ರೈತರಿಂದ ನೇರವಾಗಿ ಬತ್ತ ಖರೀದಿಸಿ ಅನ್ನಭಾಗ್ಯ ಯೋಜನೆಗೆ ಬಳಸಬೇಕು ಎಂದು ಸಲಹೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಶಾಸಕಿ ಆಯನೂರು ಮಂಜುನಾಥ್, ಮುಖಂಡರಾದ ಜಿ. ಮಾದಪ್ಪ, ರಾಮಕೃಷ್ಣ, ಆಯನೂರು ಶಿವಾನಂದಪ್ಪ, ಜಿ.ಡಿ. ಮಂಜುನಾಥ್‌ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement