ಶ್ರೀಧರರಾವ್ ವಿಧಿವಶ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.17
ತೇಲ್ಕರ್ ಗೋವಿಂದ ರಾವ್ ಶ್ರೀಧರ ರಾವ್ (ಟಿ.ಜಿ. ಶ್ರೀಧರರಾವ್) ಮಂಗಳವಾರ ಬೆಳಗ್ಗೆ ಸ್ವಗೃಹದಲ್ಲಿ ವಿಧಿವಶರಾದರು.
ಬಾಲ್ಯದಿಂದಲೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಶ್ರೀಧರರಾವ್, ಬಡತನದ ಮಧ್ಯೆ ವಿಚಾರಕ್ಕಾಗಿ ಬದುಕನ್ನು ಸವೆಸಿದವರು. ಗಾಂಧಿಬಜಾರಿನ ಬಸವಣ್ಣ ದೇವಸ್ಥಾನದ ಬಳಿ ಟೈಲರಿಂಗ್ ವೃತ್ತಿ ನಡೆಸಿಕೊಂಡು ಸಮಾಜದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೀಸಾದ ಅಡಿಯಲ್ಲಿ ಬಂಧನಕ್ಕೊಳಗಾಗಾಗಿ ಗುಲ್ಬರ್ಗ ಜೈಲಿನಲ್ಲಿ ಜೆ.ಎಚ್.ಪಟೇಲ್, ಎಂ. ಆನಂದರಾಯರಂತಹವರ ಜೊತೆಗಿದ್ದರು.
ಪ್ರಾರಂಭದಲ್ಲಿ ಜನಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ನಂತರ 1977ರಲ್ಲಿ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಶ್ರೀಧರರಾವ್ 1980ರಲ್ಲಿ ಹೊಸದಾಗಿ ರಚನೆಯಾದ ಬಿಜೆಪಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ, ಜಿಲ್ಲಾಧ್ಯಕ್ಷರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದರು.
ಇವರ ನಿಧನಕ್ಕೆ ಜಿಲ್ಲಾ ಬಿಜೆಪಿ ಸಂತಾಪ ವ್ಯಕ್ತಪಡಿಸಿದೆ. ವಿಪ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ಎಂ. ಭಾನುಪ್ರಕಾಶ್, ರಾಜ್ಯಸಭಾ ಸದಸ್ಯ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆಯನೂರು ಮಂಜುನಾಥ್, ವಿಪ ಸದಸ್ಯ ಆರ್.ಕೆ. ಸಿದ್ಧರಾಮಣ್ಣ, ಕ್ರೀಡಾ ಪ್ರಾಧಿಕಾರದ ಮಾಜಿ ಉಪಾಧ್ಯಕ್ಷ ಗಿರೀಶ್ ಪಟೇಲ್, ನಗರಸಭಾ ಮಾಜಿ ಅಧ್ಯಕ್ಷ ಎಂ. ಶಂಕರ್, ಎನ್.ಜೆ. ರಾಜಶೇಖರ್, ಎಸ್.ಎನ್. ಚನ್ನಬಸಪ್ಪ, ಮಾಜಿ ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಎಸ್.ಜ್ಞಾನೇಶ್ವರ್, ಜಿಲ್ಲಾ ಮಾಧ್ಯಮ ಪ್ರಮುಖ್ ಬಿ.ಆರ್. ಆರ್. ಮಧುಸೂಧನ್, ಡಿ.ಎಸ್. ಅರುಣ್ ಸೇರಿದಂತೆ ಹಲವಾರು ಮುಖಂಡರು ಸಂತಾಪ ಸೂಚಿಸಿದ್ದಾರೆ.