ಸಮಸ್ಯೆ ಪರಿಹಾರಕ್ಕೆ ಸಂಘಟನೆ ಅಗತ್ಯ; ಶ್ರೀರಾಂ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.17 ಸಮಾಜದಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಪರಿಹಾರ ಮಾಡಬೇಕೆಂದರೆ ಎಲ್ಲರೂ ಸಂಘಟಿತರಾಗಬೇಕು ಎಂದು ಆಲ್ ಇಂಡಿಯಾ ಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎಂ.ಎನ್. ಶ್ರೀರಾಂ ಕರೆ ನೀಡಿದರು.
ಆಶಾ ಕಾರ್ಯಕರ್ತೆಯರ ಸಂಘ ಮಂಗಳವಾರ ನಗರದ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು, ಕಾರ್ಮಿಕ, ಮಹಿಳೆಯರ, ವಿದ್ಯಾರ್ಥಿಗಳು, ರೈತ ಸೇರಿದಂತೆ ಹತ್ತಾರು ವರ್ಗಗಳ ಸಮಸ್ಯೆ ಇತ್ಯರ್ಥವಾಗಬೇಕಾದರೆ ಹೋರಾಟ ಅನಿವಾರ್ಯ. ಇದರಿಂದ ಪರಿಹಾರ ಕಂಡುಕೊಳ್ಳಬಹುದು ಎಂದರು.
ಅಧಿಕಾರದಲ್ಲಿದ್ದವರಿಗೆ ಸಾಮಾನ್ಯ ಜನರ ಸಮಸ್ಯೆಗಳು ತಿಳಿಯುವುದಿಲ್ಲ. ಸರ್ಕಾರ ಬಡವರ ಹಾಗೂ ಕಾರ್ಮಿಕರ ಕನಿಷ್ಠ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಶ್ರೀಮಂತರು ಬಂಡವಾಳಶಾಹಿಗಳು ತೆರಿಗೆ ವಂಚಿಸಿದರೂ, ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೂ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಸಾಮಾನ್ಯ ಜನರ ಮೇಲೆ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗ ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಂಡವಾಳಶಾಹಿಗಳಿಗೆ ಕೈಗೊಂಬೆ: ಖಾಸಗೀಕರಣ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಸರಿಸಿಕೊಂಡು ಬರುತ್ತಿದೆ. ಜನರಿಗೆ ಭದ್ರತೆ ನೀಡಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಸರ್ಕಾರ ತಾರತಮ್ಮ ಮಾಡುತ್ತಿದೆ. ಶ್ರೀಮಂತರು, ಬಂಡವಾಳಶಾಹಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು.
ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾತನಾಡಿ, ಸರ್ಕಾರ ಸಾಮಾನ್ಯ ಜನರ ಪರವಾಗಿ ಕೆಲಸ ಮಾಡುತ್ತಿಲ್ಲ.
ಸರ್ಕಾರದ ಮನಸ್ಥಿತಿಯನ್ನು ನೋಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯಾ ಎಂದು ಅನುಮಾನ ಮೂಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಿರ್ಮಾಲಾ ಪಾಟೀಲ್, ನೇತ್ರಾವತಿ, ಸುಜಾತ, ವನಜಾಕ್ಷಿ, ಭಾರತಿ, ಇಂದಿರಾ ಮತ್ತಿತರರು ಇದ್ದರು.