ಸುಪ್ರೀಂಗೆ ನೀಡಿರುವ ವರದಿ ಹಿಂಪಡೆಯಿರಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.17 ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಡಕೆ ಆರೋಗ್ಯಕ್ಕೆ ಹಾನಿಕರ ಎಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ವರದಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಧ್ಯಕ್ಷ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಒತ್ತಾಯಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ನಿಷೇಧ ಮಾಡುವುದರಿಂದ ರಾಜ್ಯದ ಅಡಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಒಂದು ವೇಳೆ ಅಡಕೆ ನಿಷೇಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದರೆ ಬೆಳೆಗಾರರು ಬೀದಿಗೆ ಬಿಳಲಿದ್ದಾರೆ ಎಂದರು.
ಸಮಜಾಯಿಷಿ: ಈ ಹಿಂದೆ ಗುಟ್ಕಾ ನಿಷೇಧವಾದಾಗ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಗುಟ್ಕಾ ನಿಷೇಧ ಮಾಡಬೇಕಾಯಿತು ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದರು. ಅದೇ ರೀತಿ ಇದೀಗ ಅಡಕೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅಡಕೆ ಬೆಳೆಯನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದಲ್ಲಿ ಆಗ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಡಕೆಯನ್ನು ನಿಷೇಧ ಮಾಡಿಲ್ಲ. ಇದು ಸುಪ್ರೀಂ ಕೋರ್ಟ್ ತೀರ್ಪು ಎಂದು ಸಮಜಾಯಿಸಿ ನೀಡುತ್ತದೆ ಎಂದು ತಿಳಿಸಿದರು.
ಈ ಹಿಂದೆ ವಾದ ಮಂಡಿಸಲು ಸರ್ಕಾರ ವಕೀಲರನ್ನು ನೇಮಿಸಿದ್ದು, ಇದೀಗ ವಕೀಲರನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಬೆಳೆಗಾರರ ವಿರುದ್ಧ ತೀರ್ಪು ಬಂದರೂ ಆಶ್ಚರ್ಯಪಡಬೇಕಿಲ್ಲ. ಹೀಗಾಗಿ ಕೂಡಲೇ ಸರ್ಕಾರ ವಕೀಲರನ್ನು ನೇಮಕ ಮಾಡಬೇಕು ಎಂದರು.
ದೃಢೀಕರಣ: ಭಾರತೀಯ ಆಹಾರ ಸುರಕ್ಷೆ ಗುಣಮಟ್ಟ ಪ್ರಾಧಿಕಾರದಿಂದ ಅಡಕೆ ಹಾನಿಕಾರವಲ್ಲ ಎಂಬ ದೃಢೀಕರಣ ಪಡೆದು, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ರಾಜ್ಯ ಸರ್ಕಾರ ಅಡಕೆ ಬೆಳೆಗಾರರ ಪರವಾಗಿ ತಕ್ಷಣ ವಕೀಲರನ್ನು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ನೇಮಿಸಿ ಕಾಲಕಾಲಕ್ಕೆ ಸರಿಯಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ರೈಸ್‌ಮಿಲ್ ಮಾಲೀಕರು ಕಳೆದೆರಡು ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ರೈತ ಸಂಘ ಬೆಂಬಲವ್ಯಕ್ತಪಡಿಸಲಿದೆ ಎಂದ ಅವರು, ಡಿ.21ರಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ಕಾರಿ ನೌಕರರ ಭವನದಲ್ಲಿ
ರೈತ ಸಂಘದ ಸಂಸ್ಥಾಪಕ ದಿವಂಗತ ಎನ್.ಡಿ. ಸುಂದರೇಶ್ ಅವರ ನೆನಪಿನ ಸಭೆ ಆಯೋಜಿಸಲಾಗಿದೆ.
ರೈತ ಮುಖಂಡ ಕಡಿದಾಳ್ ಶಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದ್ದು, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಕೋಶಾಧ್ಯಕ್ಷ ಡಾ.ಬಿ.ಎಂ. ಚಿಕ್ಕಸ್ವಾಮಿ, ಉಪಾಧ್ಯಕ್ಷೆ ಅನುಸೂಯಮ್ಮ ಮತ್ತಿತರರು ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಕಡಿದಾಳು ಶಾಮಣ್ಣ, ಸಂಘದ ಕೋಶಾಧ್ಯಕ್ಷ ಡಾ. ಬಿ.ಎಂ. ಚಿಕ್ಕಸ್ವಾಮಿ, ಮಲ್ಲಿಕಾರ್ಜುನ, ಎಸ್. ಶಿವಮೂರ್ತಿ, ವಸಂತಕುಮಾರ್, ಹಿಟ್ಟೂರು ರಾಜು ಮೊದಲಾದವರು ಇದ್ದರು.
'ಬಿಜೆಪಿ, ಕೆಜೆಪಿಯಿಂದ ಸುಳ್ಳು ಮಾಹಿತಿ'
ಕ.ಪ್ರ.ವಾರ್ತೆ, ಸಾಗರ, ಡಿ.17
ಕೇಂದ್ರ ಸರ್ಕಾರದ ಮುಂದೆ ಅಡಕೆ ಬೆಳೆ ನಿಷೇಧದ ಪ್ರಸ್ತಾಪ ಇಲ್ಲದಿದ್ದರೂ ಬಿಜೆಪಿ, ಕೆಜೆಪಿ ಸಂಸದರು, ಶಾಸಕರು, ಮುಖಂಡರು ಬೆಳೆಗಾರರಿಗೆ ಸುಳ್ಳು ಮಾಹಿತಿ ನೀಡಿ ಆತಂಕದಲ್ಲಿರುವಂತೆ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ, ಅಡಕೆ ನಿಷೇಧಿಸುವುದಿಲ್ಲ ಎಂದು ಕೇಂದ್ರದ ಆರೋಗ್ಯ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಅಡಕೆ ಬೆಳೆ ನಿಷೇಧಿಸುವಂತೆಸುಪ್ರೀಂ ಕೋರ್ಟ್‌ಗೆ ಪೂರಕ ಅರ್ಜಿ ಸಲ್ಲಿಸಿದೆ ಎಂದು ಹೇಳುವವರು ಪ್ರಮಾಣಪತ್ರವನ್ನು ಜನರೆದುರು ಬಹಿರಂಗ ಪಡಿಸುವಂತೆ ಸವಾಲು ಹಾಕಿದರು.
ಸಂಸೋಧನೆಯಿಂದ ಸಾಬೀತು: ಅಡಕೆಗೆ ಸಂಬಂಧಿಸಿದಂತೆ 2004ರಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ತಂಬಾಕು, ಇನ್ನಿತರ ರಾಸಾಯನಿಕ ಸೇರಿಸಿದಾಗ ಮಾತ್ರ ಅಡಕೆ ಹಾನಿಕಾರಕವಾಗುತ್ತದೆ ಎಂಬ ವಾದ ಇದೆಯೇ ಹೊರತು, ಶುದ್ಧ ಅಡಕೆ ಹಾನಿಕಾರಕ ಅಲ್ಲ ಎನ್ನುವುದು ಸಂಶೋಧನೆಯಿಂದ ಸಾಬೀತಾಗಿದೆ ಎಂದರು.
ಪ್ರಾಮಾಣಿಕ ಪ್ರಯತ್ನ: ಎಪಿಎಂಸಿ ಅಧ್ಯಕ್ಷ ಕೆ. ಹೊಳೆಯಪ್ಪ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಸಿಗುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆದಿದೆ. ತಾಲೂಕಿನ ಬೇರೆಬೇರೆ ಭಾಗಗಳಲ್ಲಿ ಸಂತೆ ಮೈದಾನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದವರು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ತೀ.ನ. ಶ್ರೀನಿವಾಸ್ ಕಾಂಗ್ರೆಸ್ ಪ್ರಮುಖ ಮಕ್ಬೂಲ್ ಅಹ್ಮದ್, ಐ.ಎನ್. ಸುರೇಶಬಾಬು, ಎನ್. ಲಲಿತಮ್ಮ, ಸುಂದರಸಿಂಗ್, ಹಮೀದ್ ಹಾಜರಿದ್ದರು.
ಇಂದು ಸಾಗರ ಬಂದ್
ಸಾಗರ: ಅಡಕೆ ಬೆಳೆಗೆ ಮರಣ ಶಾಸನ ಬರೆಯಲು ಹೊರಟಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನಿರ್ಧಾರ ವಿರೋಧಿಸಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಡಿ. 18ರಂದು ಕರೆ ನೀಡಿರುವ ಸಾಗರ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ಘೋಷಿಸಿದೆ. ಈ ಬಂದ್‌ನಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ಸಿಗೆ ಎಲ್ಲಾ ಅಡಕೆ ಬೆಳೆಗಾರರು, ಸಂಘಸಂಸ್ಥೆಗಳು ಸಹಕಾರ ನೀಡಬೇಕು ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಚೇತನರಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹಾಗೆಯೇ ನಮೋ ಬ್ರಿಗೇಡ್ ತಾಲ್ಲೂಕು ಘಟಕ, ಅಡಕೆ ಬೆಳೆಗಾರರ ಸಂಸ್ಥೆಗಳಾದ ಆಪ್‌ಕೋಸ್, ತೋಟಗಾರ್ ಹಾಗೂ ಟಿಎಪಿಎಂಸಿಎಸ್ ತಮ್ಮ ಬೆಂಬಲ ಘೋಷಿಸಿದ್ದು ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿಕೆ ನೀಡಿದೆ.