ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಡಕೆ ನಿಷೇಧಿಸಿದರೆ ಸಾಮೂಹಿಕ ಆತ್ಮಹತ್ಯೆ

Lingaraj Badiger
Updated On : 19 Dec 2013, 11:17 am

ಕ.ಪ್ರ.ವಾರ್ತೆ, ಸಾಗರ, ಡಿ.18
ಪದೇಪದೇ ಅಡಕೆ ಬೆಳೆಗಾರರನ್ನು ಕೆಣಕಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತಛ್ತದೆ. ಜನಶಕ್ತಿಯ ಮುಂದೆ ರಾಜಸತ್ತೆ ನಿರ್ನಾಮವಾಗುತ್ತದೆ ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಸಾರ್ಕರವನ್ನು ಎಚ್ಚರಿಸಿದರು.
ಅಡಕೆ ಬೆಳೆ ನಿಷೇಧಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಖಂಡಿಸಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ, ಅಡಕೆ ನಿಷೇಧಿಸುವ ಪ್ರಸ್ತಾಪ ಅವಿವೇಕತನದ್ದು, ಜನವಿರೋಧಿಯಾದದ್ದು. ಈ ರೀತಿಯ ಕೆಲಸಕ್ಕೆ ಮುಂದಾದರೆ ಅಡಕೆ ಬೆಳೆಗಾರರ ಸಾಮೂಹಿಕ ಆತ್ಮಹತ್ಯೆ  ನೋಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದರು.
ಒಂದಿಲ್ಲೊಂದು ಆತಂಕ: ಹಲವು ವರ್ಷದಿಂದ ಅಡಕೆ ಬೆಳೆಗಾರರು ಒಂದಿಲ್ಲೊಂದು ಆತಂಕದಿಂದ ಬದುಕುತ್ತಿದ್ದಾರೆ. ಈಗ ಬೆಳೆ ನಿಷೇಧದ ಆತಂಕ ನೆತ್ತಿಯ ಮೇಲೆ ತೂಗುಕತ್ತಿಯಾಗಿ ಪರಿಣಮಿಸಿದೆ. ಒಂದೊಮ್ಮೆ ಅಡಕೆ  ನಿಷೇಧಿಸಿದೆ ಬೆಳೆಗಾರರ ಜೊತೆಗೆ ಅಡಕೆ ಅವಲಂಬಿತ ಲಕ್ಷಾಂತರ ಜನರು ಬೀದಿಗೆ ಬರುತ್ತಾರೆ. ಇಡೀ ಸಮಾಜ ವ್ಯವಸ್ಥೆಯಲ್ಲಿ ಅಲ್ಲೋಲ-ಕಲ್ಲೋಲ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಅಡಕೆ ನಿಷೇಧ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಲಿಲ್ಲ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಹಾಸ್ಯಾಸ್ಪದ ಎಂದ ಅವರು, ನ್ಯಾಯಾಲಯದಲ್ಲಿ ಸರ್ಕಾರದ ಪ್ರತಿನಿಧಿ ಬೆಳೆ ನಿಷೇಧ ಕುರಿತಂತೆ ಮೌಕಿಕ ಹೇಳಿಕೆ ನೀಡಿದರೂ ಅದು ದಾಖಲೆಯೇ ಆಗುತ್ತದೆ ಎಂದರು.
ಸಾಬೀತಾಗಿಲ್ಲ: ಅಡಕೆ ಆರೋಗ್ಯಕ್ಕೆ ಹಾನಿಕರವೆಂದು ಎಲ್ಲಿಯೂ ಸಾಬೀತಾಗಿಲ್ಲ. ಈ ಕುರಿತ ಯಾವ ಸಂಶೋಧನೆಗಳೂ ಅಂತಿಮ ಹಂತ ತಲುಪಿಲ್ಲ. ಅಡಕೆ ಆರೋಗ್ಯಕ್ಕೆ ಪೂರಕ ಎನ್ನುವ ಕುರಿತು ಹಲವಾರು ಸಂಶೋಧನೆಗಳು ನಡೆದು ವರದಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಇವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಮಾತನಾಡಿ, ಗ್ಯಾಟ್ ಒಪ್ಪಂದದ ನಂತರ ಬಹುರಾಷ್ಟ್ರೀಯ ಕಂಪನಿಗಳು ದೇಶದ ಇಡೀ ವ್ಯವಸ್ಥೆಯನ್ನು ಆಪೋಶನ ತೆಗೆದುಕೊಳ್ಳುವ ಹುನ್ನಾರ ನಡೆಸುತ್ತಿದೆ. ಇದರ ಭಾಗವಾಗಿಯೇ ಅಡಕೆ ನಿಷೇಧದ ಪ್ರಸ್ತಾಪವೂ ಮುಂದೆ ಬಂದಿದೆ. ಇದರ ಹಿಂದೆ ಸಿಗರೇಟು, ತಂಬಾಕಿನ ದೊಡ್ಡ ಲಾಬಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಅಡಕೆಯಲ್ಲಿ ರಾಜಕೀಯ ಬೇಡ: ಅಪೆಕ್ಸ್ ಬ್ಯಾಂಕ್ ಹಾಗೂ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎ. ಮಂಜುನಾಥಗೌಡ ಮಾತನಾಡಿ,  ರಾಜಕೀಯ ವಿಚಾರಗಳಿಗೆ ಅಡಕೆ ಬಲಿಕೊಡಬಾರದು. ರಾಜ್ಯ ಸರ್ಕಾರ ಕಾವೇರೀ ನದಿ ನೀರು ಹಂಚಿಕೆ ಕುರಿತಂತೆ ಸುಪ್ರಿಂ ಕೋರ್ಟಿನಲ್ಲಿ ರಾಜ್ಯದ ಪರವಾಗಿ ವಕೀಲರನ್ನು ನೇಮಿಸಿದಂತೆ ಅಡಕೆ ಹೋರಾಟಕ್ಕೆ ವಕೀಲರನ್ನು ನೇಮಿಸಿ ವಾದ ಮಂಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಕಿಸಾನ್ ಸೆಲ್ ಉಪಾಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅಡಕೆ ನಿಷೇಧ ಕುರಿತು ಸಲ್ಲಿಸಿರುವ ವರದಿ ಸಾರ್ವಜನಿಕರಿಗೆ ಸಿಗುವಂತೆ ಆಗಬೇಕು ಎಂದರು.
ವಿವಿಧ ಅಡಕೆ ಸಹಕಾರಿ ಸಂಸ್ಥೆಗಳ ಪ್ರಮುಖರು, ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು, ರಾಜಕೀಯ ಪಕ್ಷದ  ಮುಖಂಡರು, ಮಹಿಳಾ ಮುಖಂಡರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement