ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕನಸಾಗಿಯೇ ಉಳಿದ ಅಭಿವೃದ್ಧಿ ಕಾರ್ಯ

Lingaraj Badiger
Updated On : 19 Dec 2013, 11:17 am

ಕ.ಪ್ರ.ವಾರ್ತೆ, ಸೊರಬ, ಡಿ.18
ರಸ್ತೆ ಅಗಲೀಕರಣ ಸದ್ಯದಲ್ಲಿಯೇ ಆರಂಭ, ಚತುಷ್ಪಥ, ದ್ವಿಪಥ, ನಡುವೆ ಹೈಮಾಸ್ಟ್ ದೀಪಗಳ ಸಾಲು....ಹೀಗೆ ಕೇಳಿ ಬಂದ ಘೋಷಣೆಗಳ ಸರಮಾಲೆ ನಡುವೆ ಸೊರಬ ಪಟ್ಟಣ ರಸ್ತೆ ಭಾಗಶಃ  ಅಗಲೀಕರಣ ಆಯ್ತು. ಇನ್ನರ್ಧ ಅಗಲೀಕರಣವೂ ಇಲ್ಲ,  ದುರಸ್ತಿಯೂ ಆಗಿಲ್ಲ.
ಹಲವಾರು ಗುಂಡಿ, ಕೊರಕಲ ನಡುವೆ ಪಟ್ಟಣದ ಮುಖ್ಯರಸ್ತೆ ಹಾದು ಹೋಗಿದ್ದು, ಚಾಣಾಕ್ಷತನವಿದ್ದವರು ಹುಡುಕಿ ಹೇಗೋ ಚಲಾಯಿಸುತ್ತಾನೆ.
ಆದರೆ ರಸ್ತೆಯ ಬದಿಯಲ್ಲಿರುವ ನಿವಾಸಿಗಳಿಗೆ ಮಾತ್ರ ಯಾವ ಕ್ಷಣದಲ್ಲಿ ಯಾವ ಪ್ರಮಾಣದ ಜಲ್ಲಿ ಕಲ್ಲು ಬಂದು ಬಡಿಯಬಹುದು, ಧೂಳಿನೊಂದಿಗೆ ಮರಳು ಕಣಗಳು ಸೇರಿ ಕಣ್ಣು ಕಳೆದುಕೊಳ್ಳುತ್ತೇವೆಯೋ ಎಂಬ ಆತಂಕ.
ಎರಡನೇ ಸ್ಥಾನ: ಇತ್ತೀಚೆಗಷ್ಟೇ ಟ್ರಾಫಿಕ್ ಸೆನ್ಸೆಸ್ ನಡೆದಿದ್ದು, ದ್ವಿಚಕ್ರ ವಾಹನಗಳ ಸಂಖ್ಯೆಯಲ್ಲಿ ಜಿಲ್ಲೆಯ ಎರಡನೇ ಸ್ಥಾನ ಸೊರಬದ್ದಾಗಿದೆ. ನಾಲ್ಕು ಚಕ್ರಗಳ ಸಂಖ್ಯೆಯಲ್ಲಿ 3ನೇ ಸ್ಥಾನ ಪಡೆದಿದೆ.  ದಿನಂಪ್ರತಿ ತಿರುಗಾಡುವ ವಾಹನಗಳ ಸಂಖ್ಯೆ ಹಿನ್ನೆಲೆಯಲ್ಲಿ ರಸ್ತೆ ವಿಸ್ತೀರ್ಣ ಅವಶ್ಯವಾಗಿದೆ.
ಈ ಅಧಿಕ ಸಂಖ್ಯೆ ವಾಹನದ ಹಿನ್ನೆಲೆ, ಭವಿಷ್ಯದಲ್ಲಿ ಕೆ.ಕೆ. ರಾಷ್ಟ್ರೀಯ ಹೆದ್ದಾರಿಗೆ ಪೂರಕವಾಗಿ ಈ ಮುಖ್ಯ ರಸ್ತೆಯನ್ನು 120 ಅಡಿ ವಿಸ್ತಾರದ ಚತುಷ್ಪಥವಾಗಿ ನಿರ್ಮಿಸಲಾಗುತ್ತದೆ ಎಂಬ ಮಾಹಿತಿ ಇತ್ತು, ಆದರೆ, ಬೇರೆ ಬೇರೆ ಕಾರಣಗಳಿಂದ ರಸ್ತೆ ವಿಸ್ತಾರಗೊಳ್ಳದೆ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಮಾತ್ರ ಹೆಚ್ಚಾಗುತ್ತಿದೆ.
ಸುರಕ್ಷತೆಯಲ್ಲಿ ಏರುಪೇರು: ಪ್ರಯಾಣದ ಅವಧಿ, ರಸ್ತೆ ಸುರಕ್ಷತೆಯಲ್ಲಿ ಏರುಪೇರಾಗುತ್ತಿದೆ. ಆರೋಗ್ಯದ ಸ್ಥಿತಿ ಹದಗೆಡುತ್ತಿದೆ. ಈ ಕುರಿತು ಹಲವು ಬಾರಿ ರಕ್ಷಣಾ ಇಲಾಖೆ ಗಮನಕ್ಕೆ ತಂದಿದ್ದರೂ, ಇಲಾಖೆ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಕೈ ಚೆಲ್ಲಿಕುಳಿತಿದೆ.
ಟ್ರಾಫಿಕ್ ನಿಯಂತ್ರಣದ ಗೋಜಿಗೆ ಹೋಗದೇ ಇರುವುದರಿಂದ ಓಡಾಡಿದ್ದೇ ಹಾದಿ ಎಂದು ಅಡ್ಡಾದಿಡ್ಡಿ ವಾಹನ ಚಲಾಯಿಸುವುದು, ರಸ್ತೆ ತುಂಬೆಲ್ಲ ವಾಹನ ನಿಲ್ಲಿಸುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ. ಇಡೀ ರಸ್ತೆಯೇ ಪಾರ್ಕಿಂಗ್ ಆಗಿರುವುದರಿಂದ ಹೊಸತಾಗಿ ಬಂದ ಜನ ರಸ್ತೆ ಹುಡುಕುವುದು ಮಾತ್ರ ತಪ್ಪಿಲ್ಲ.
ಜಲ್ಲಿ ಪೌಡರ್: ಕೆಲ ತಿಂಗಳ ಹಿಂದೆ ಇಲ್ಲಿನ ರಸ್ತೆ ದುರಸ್ತಿ ನೆಪದಲ್ಲಿ ಜಲ್ಲಿ ಪೌಡರ್ ಹಾಕಿ, ಗುಂಡಿ ಮುಚ್ಚುವ ಪ್ರಹಸನ ನಡೆಯಿತು. ತೆಳು ಟಾರ್ ಕೂಡ ಬಳಿಯಲಾಯಿತು. ಇವೆಲ್ಲಾ ಒಂದೇ ಮಳೆಗೆ ಅಳಿಸಿ ಹೋದದ್ದೂ ಆಯಿತು. ಮತ್ತೆ ಅದೇ ತಗ್ಗು, ಅದೆ ಧೂಳು ಕುಡಿಯುವ ಭಾಗ್ಯ ನಿವಾಸಿ, ಪ್ರಯಾಣಿಕರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement