ಕುಕ್ಕರ್ ಸ್ಫೋಟ: ವ್ಯಕ್ತಿ ಸಾವು
ಶಿವಮೊಗ್ಗ: ಇಲ್ಲಿನ ಸವರ್‌ಲೈನ್ ರಸ್ತೆಯಲ್ಲಿ ಬುಧವಾರ ರಾತ್ರಿ 10.15ರ ಸುಮಾರಿಗೆ ನಡೆದ ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಅದರ ಪ್ಲೇಟ್ ತಲೆಗೆ ಬಡಿದು ಗ್ರಾಹಕ ಸುಬ್ರಮಣಿ (40) ಎಂಬುವರು ಮೃತಪಟ್ಟಿದ್ದಾರೆ.
ಸುಬ್ರಮಣಿ ಗಾಯಗೊಂಡು ನರಳುತ್ತಿದ್ದಾಗ ಸುಮಾರು 45 ನಿಮಿಷ ಆ್ಯಂಬುಲೆನ್ಸ್ ತಡವಾಗಿ ಬಂದಿದ್ದು, ಚಿಕಿತ್ಸೆ ವಿಳಂಬವಾಯಿತು. ನಂತರ ಸಾರ್ವಜನಿಕರು ಆತನನ್ನು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದ್ದಾನೆ.
ಇಲ್ಲಿನ ರಂಗನಾಥ ವೈನ್ಸ್ ಒಳಭಾಗದಲ್ಲಿ ಸುಬ್ರಮಣಿಯವರು ತಮ್ಮ ಸ್ನೇಹಿತರೊಂದಿಗೆ ಮದ್ಯಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ಕುಕ್ಕರ್ ಸ್ಫೋಟಗೊಂಡಿದೆ. ಶೇಂಗಾ ಬೇಯಿಸುತ್ತಿದ್ದ ಕುಕ್ಕರ್ ಸ್ಫೋಟಗೊಂಡಿದ್ದು, ಸುಬ್ರಮಣಿ ಹೊರತಾಗಿ ಉಳಿದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತ: ಬೈಕ್ ಸವಾರ ಸಾವು
ಸೊರಬ: ಪಟ್ಟಣದ ಶಿರಾಳಕೊಪ್ಪ ರಸ್ತೆಯ ಅರಣ್ಯ ಇಲಾಖೆ ಎದುರು ಬುಧವಾರ ಸಂಜೆ ನಡೆದ ವಾಹನ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಕೋಣನಮನೆ ಜಗದೀಶ್ ಗೌಡ ಎಂದು ಗುರುತಿಸಲಾಗಿದೆ.
ಹರೂರಿನಿಂದ ಹೋರಿ ಹಬ್ಬ ಮುಗಿಸಿ ಬರುತ್ತಿದ್ದ ಟಾಟಾ ಏಸ್ ಹಾಗೂ ಉದ್ರಿಯಿಂದ ಸೊರಬಕ್ಕೆ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾಗಿ ಬೈಕಲ್ಲಿದ್ದ ಜಗದೀಶ್ ಗೌಡ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಬೈಕ್‌ನಲ್ಲಿದ್ದ ಮತ್ತೊಬ್ಬ ಸವಾರ ಮಾರುತಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸೊರಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗ್ನಿ ಆಕಸ್ಮಿಕ: ಲಕ್ಷಾಂತರ ನಷ್ಟ
ಸಾಗರ: ಪಟ್ಟಣದ ಅಶೋಕ ರಸ್ತೆಯ ಎರಡು ಮನೆಗಳಿಗೆ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಅಶೋಕ ರಸ್ತೆಯ ದತ್ತಾತ್ರೇಯ ವಿ. ಕುಂಠೆ ಅವರಿಗೆ ಸೇರಿರುವ ಸ್ಟೈಲ್ ಇನ್ಸ್‌ಟೆಕ್ ಬಟ್ಟೆ ಅಂಗಡಿ ಹಾಗೂ ಮನೆ, ಎಸ್.ಎಂ.ಕುಮಾರ್ ಎಂಬುವವರ ಮನೆಗೆ ಬೆಂಕಿ ತಗುಲಿದೆ. ಅಗ್ನಿ ಆಕಸ್ಮಿಕದಿಂದಾಗಿ ಮನೆಯ ಹಿಂಭಾಗ ಸಂಪೂರ್ಣ ಸುಟ್ಟು ಹೋಗಿದೆ. ದತ್ತಾತ್ರೇಯ ವಿ. ಕುಂಠೆ ಅವರ ಮನೆಯಲ್ಲಿದ್ದ ಬೀರು, ಹಾಸಿಗೆ, ಮಂಚ ಬೆಂಕಿಗೆ ಆಹುತಿಯಾಗಿದೆ. ಸುಮಾರು ಒಂದು ಲಕ್ಷ ರೂ. ನಷ್ಟ ಸಂಭವಿಸಿದೆ.
ಇಂದು ಪ್ರತಿಭಟನೆ
ಮದ್ಯದಂಗಡಿಯಲ್ಲಿ ಬಹಿರಂಗವಾಗಿ ಮದ್ಯಪಾನ ಮಾಡಲು ಅವಕಾಶ ನೀಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಕೃಷ್ಣದೇವರಾಯ ಸಂಘ ಆರೋಪಿಸಿದೆ.
ಮದ್ಯದಂಗಡಿಗಳಲ್ಲೇ ಮದ್ಯಪಾನ ಮಾಡುವುದನ್ನು ಅಧಿಕಾರಿಗಳು ತಡೆಗಟ್ಟಬೇಕು ಎಂದು ಒತ್ತಾಯಿಸಿ ಡಿ. 19ರಂದು ನಗರದಲ್ಲಿ ಪ್ರತಿಭಟನೆ ನಡೆಸುವುದಾಗಿ ಸಂಘದ ಅಧ್ಯಕ್ಷ ಸತೀಶ್ ಬಾಬು ತಿಳಿಸಿದ್ದಾರೆ.