ಡಿಸಿಯವರೇ ನಿರ್ಲಕ್ಷ್ಯ ಸಾಕು ಮಾಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.18
ಜನ್ ನರ್ಮ್ ಯೋಜನೆಯಡಿ ಶಿವಮೊಗ್ಗ ನಗರ ಸಾರಿಗೆಗೆಂದು 65 ಬಸ್‌ಗಳನ್ನು ಕೊಡಮಾಡಿದ್ದರೂ, ಯೋಜನೆ ಅನುಷ್ಠಾನಕ್ಕೆ ಉದಾಸೀನ ಮಾಡುತ್ತಿರುವ ಜಿಲ್ಲಾಡಳಿತದ ಕಿವಿ ಹಿಂಡಿರುವ ಅಣ್ಣಾ ಹಜಾರೆ ಹೋರಾಟ ಸಮಿತಿ, ಸೂಕ್ತ ಜಾಗವನ್ನೂ ತೋರಿಸಿ ಮನವಿ ಸಲ್ಲಿಸಿದೆ.
ನಗರದ ಬಿಎಚ್ ರಸ್ತೆಯ ವಿದ್ಯಾನಗರದಲ್ಲಿರುವ ಹಳೆ ಮೈ ಮ್ಯಾಚ್ (ವಿಮ್ಕೋ) ಫ್ಯಾಕ್ಟರಿಯ 9 ಎಕರೆ ಜಾಗವು ಕಳೆದ 40 ವರ್ಷಗಳಿಂದ ಹಾಳು ಬಿದ್ದಿದ್ದು, ಈ ಜಾಗ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಸ್ವಾಧೀನದಲ್ಲಿದೆ. ಈ ಜಾಗವನ್ನು ಜನ್ ನರ್ಮ್ ಯೋಜನೆಗಾಗಿ ಬಳಸಿಕೊಳ್ಳುವ ವಿಚಾರವಾಗಿ ಅರಣ್ಯ ಇಲಾಖೆಯೊಂದಿಗೆ ಚರ್ಚಿಸುವಂತೆ ಜಿಲ್ಲಾಡಳಿತಕ್ಕೆ ಅಣ್ಣಾ ಹಜಾರೆ ಹೋರಾಟ ಸಮಿತಿ ಹಾಗೂ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಸಲಹೆ ನೀಡಿದೆ.
ಸ್ಥಳ ಪರಿಶೀಲನೆ: ಈ ಜಾಗವನ್ನು ಬಳಸಿಕೊಂಡರೆ ಮುಂದೆ ನಗರಕ್ಕೆ ಮಂಜೂರಾಗುವ ಡಿವಿಜನ್ ಕಚೇರಿಗೂ ಅವಕಾಶವಾಗುತ್ತದೆ. ಹೀಗಾಗಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಸಂಘಟನೆ ಸದಸ್ಯರು ಒತ್ತಾಯಿಸಿದ್ದಾರೆ.
ಶಿವಮೊಗ್ಗ ನಗರಕ್ಕೆ 65 ಬಸ್ ಹಾಗೂ ಭದ್ರಾವತಿ ನಗರಕ್ಕೆ 35 ಬಸ್‌ಗಳನ್ನು ನೀಡಲು ಕೇಂದ್ರದ ನಗರಾಭಿವೃದ್ಧಿ ಇಲಾಖೆ ತನ್ನ ಮೊದಲೇ ಸಿಎಂಎಸ್‌ಸಿ ಸಭೆಯಲ್ಲಿ ತೀರ್ಮಾನಿಸಿತು. ಶಿವಮೊಗ್ಗ ನಗರಕ್ಕೆ ರು. 18.85 ಕೋಟಿ ಮತ್ತು ಭದ್ರಾವತಿ ನಗರಕ್ಕೆ ರು. 10.15 ಕೋಟಿ ನಿಗದಿಪಡಿಸಿ, ಮೊದಲ ಕಂತನ್ನೂ ಮಂಜೂರು ಮಾಡಿತು. ಯೋಜನೆ ಜಾರಿಗೆ 2 ತಿಂಗಳ ಕಾಲಮಿತಿಯನ್ನೂ ನಿಗದಿಪಡಿಸಿ, ಕೇಂದ್ರ ಸರ್ಕಾರ ಸೂಚನೆ ನೀಡಿತು.
ಜಿಲ್ಲಾಡಳಿತದ ಹೊಣೆಗಾರಿಕೆ: ಈ ಯೋಜನೆಗೆ ಬಸ್ ಟರ್ಮಿನಲ್, ಡಿಪೋ ಮತ್ತು ವರ್ಕ್ ಶಾಪ್‌ಗೆ ಜಾಗ ನಿಗದಿ ಮಾಡುವುದು ಜಿಲ್ಲಾಡಳಿತದ ಹೊಣೆಗಾರಿಕೆ. ಆದರೆ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಈ ಯೋಜನೆ ಬಗ್ಗೆ ಉದಾಸೀನ ಮಾಡುತ್ತಿದ್ದಾರೆ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 2 ತಿಂಗಳಿನಿಂದಲೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಯೋಜನೆ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿದರೂ, ಯಾರೂ ಕೂಡ ಚಕಾರ ಎತ್ತದಿರುವುದು ದುರ್ದೈವದ ಸಂಗತಿ ಎಂದು ಮುಖಂಡರು ತಿಳಿಸಿದ್ದಾರೆ.
ಇನ್ನಾದರೂ ಡಿಸಿಯವರು ವಿಳಂಬ ಮತ್ತು ನಿರ್ಲಕ್ಷ್ಯ ಭಾವನೆ ವಹಿಸದೇ ತುರ್ತಾಗಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕೆಂದು ಸಾಮಾಜಿಕ ಹೋರಾಟಗಾರರಾದ ಟಿ.ಎಂ. ಅಶೋಕ್ ಯಾದವ್, ಕಲ್ಲೂರು ಮೇಘರಾಜ, ಸರ್ಜಾ ಶಂಕರ ಹರಳಿಮಠ, ಮಂಜುಳಾ ದೇವಿ, ಸಿ.ರಮೇಶ್, ಕಡ್ಲೇಕಾಯಿ ಮಂಜುನಾಥ, ಸುವರ್ಣ ನಾಗರಾಜ್, ಮಲ್ಲೇಶಪ್ಪ, ಆನಂದ್ ಮೊದಲಾದರು ಒತ್ತಾಯಿಸಿದ್ದಾರೆ.