ಪ್ರತಿಭಾ ಕಾರಂಜಿ ಉದ್ಘಾಟನೆ
ತೀರ್ಥಹಳ್ಳಿ: ಶೈಕ್ಷಣಿಕವಾಗಿ ಶಿವಮೊಗ್ಗ ಜಿಲ್ಲೆ ರಾಜ್ಯದಲ್ಲಿ ಕೊನೆ ಸ್ಥಾನದಲ್ಲಿದ್ದು, ಈ ನ್ಯೂನತೆಯನ್ನು ತೊಡೆದು ಹಾಕಲು ಪ್ರಯತ್ನಿಸಬೇಕಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ತೀರ್ಥಹಳ್ಳಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ಅಗತ್ಯವಿದೆ ಎಂದು ಹೇಳಿದರು.
ಜೂನ್ ತಿಂಗಳಲ್ಲೇ ಪಠ್ಯ ಪುಸ್ತಕ: ಉತ್ತಮ ರೀತಿಯ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನ ಸರ್ಕಾರ ಹಾಗೂ ತಮ್ಮದಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಜೂನ್ ತಿಂಗಳಲ್ಲೇ ಮಕ್ಕಳಿಗೆ ಅಗತ್ಯ ಪಠ್ಯಪುಸ್ತಕ, ಸಮವಸ್ತ್ರ ನೀಡಲಾಗುತ್ತದೆ. ಸೈಕಲ್ಗಳನ್ನು ವರ್ಷಾರಂಭದಲ್ಲೇ ನೀಡಲಾಗುವುದು. ಇದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಿಕ್ಷಕರ ಕೊರತೆ ನೀಗಿಸಲು 12,000 ಶಿಕ್ಷಕರನ್ನು ನೇಮಿಸಲಾಗಿದೆ. ಕೊರತೆ ಇರುವ ಸ್ಥಾನಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಭರ್ತಿ ಮಾಡಲಾಗುವುದು ಎಂದರು.
ತಾಪಂ ಅಧ್ಯಕ್ಷೆ ರೇಣುಕಾ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಎಲ್ಲಪ್ಪ, ಸದಸ್ಯ ಪದ್ಮನಾಭ್, ಶೃತಿ ವೆಂಕಟೇಶ್, ತಾಪಂ ಉಪಾಧ್ಯಕ್ಷ ಸುಧಾಕರ್, ಪ್ರಭಾಕರ್, ಉಪಪ್ರಾಂಶುಪಾಲ ಚಿಕ್ಕಪ್ಪ ಇದ್ದರು.