ಲೆವಿ ನಿಗದಿ ಅವೈಜ್ಞಾನಿಕ
ಸಾಗರ: ಪ್ರತಿವರ್ಷ ಸರ್ಕಾರ ಅಕ್ಕಿ ಗಿರಣಿದಾರರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಲೇವಿ ಗುರಿ ನಿಗದಿಪಸುತ್ತಿತ್ತು. ಈ ಬಾರಿ ಮಾತ್ರ ಲೆವಿ ಸಭೆ ಕರೆಯದೆ ಏಕಪಕ್ಷೀಯವಾಗಿ ಲೇವಿ ನಿಗದಿಪಡಿಸಿ ಆದೇಶ ಹೊರಡಿಸಿರುವ ಕ್ರಮ ಅವೈಜ್ಞಾನಿಕ ಎಂದು ಗಿರಣಿದಾರರ ಸಂಘದ ಕಾರ್ಯಾಧ್ಯಕ್ಷ ಕೆ.ಜೆ. ರುದ್ರಾರಾಧ್ಯ ತ್ಯಾಗರ್ತಿ ಹೇಳಿದರು. ಇಲ್ಲಿನ ಮಲೆನಾಡು ಸಿರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಕರ್ನಾಟಕ ರಾಜ್ಯ ಅಕ್ಕಿ ಗಿರಣಿದಾರರ ಸಂಘದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರವು 2013-14ನೇ ಸಾಲಿಗೆ ಹೊರಡಿಸಿರುವ ಲೆವಿ ಆದೇಶ 1999ರ ಲೇವಿ ಆದೇಶದ ಯಾಥ ಪ್ರತಿಯಾಗಿದೆ. ಇದು ಅತ್ಯಂತ ಅವೈಜ್ಞಾನಿಕವಾಗಿದ್ದು, ಗಿರಣಿ ಮಾಲೀಕರು ಈ ನೀತಿಯಿಂದ ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮೂಗಿಮನೆ ಸುಬ್ರಾಯ ಹೆಗಡೆ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಪ್ರಮುಖರಾದ ಸುಬ್ರಾವ್ ಆನಂದಪುರಂ, ಗೋವಿಂದ ಪ್ರಭು, ಶಿವಾನಂದ ಪ್ರಭು ಕಾರ್ಗಲ್, ಮೋಹನ್ ಇತರರಿದ್ದರು.
ಅಂತರರಾಷ್ಟ್ರೀಯ ಸಮಾವೇಶ ಇಂದಿನಿಂದ
ಶಿವಮೊಗ್ಗ: ಜವಾಹರಲಾಲ್ ನೆಹರೂ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ, ಅಸೋಸಿಯೇಷನ್ ಆಫ್ ಕಂಪ್ಯೂಟರ್ ಎಲೆಕ್ಟ್ರಾನಿಕ್ಸ್ ಆಂಡ್ ಎಲೆಕ್ಟ್ರಿಕಲ್ ಎಂಜಿನಿಯರ್ಸ್ ಸಹಭಾಗಿತ್ವದಲ್ಲಿ 3 ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಲ್ಟಿಮೀಡಿಯಾ ಪ್ರೊಸೆಸಿಂಗ್, ಕಮ್ಯುನಿಕೇಷನ್ ಅಂಡ್ ಇನ್‌ಫರ್ಮೇಶನ್ ಟೆಕ್ನಾಲಜಿ-2013 ಸಮಾವೇಶ 19 ರಿಂದ 21ರವರೆಗೆ ಕಾಲೇಜು ಆವರಣದಲ್ಲಿ ನಡೆಯಲಿದೆ. ಕಳೆದ ಕೆಲವು ವರ್ಷಗಳಿಂದ ಬಹುಮಾಧ್ಯಮ ಸಂಸ್ಕರಣೆ (ಮಲ್ಟಿ ಮೀಡಿಯಾ ಪ್ರೊಸೆಸಿಂಗ್) ಒಂದು ಬಹುಮುಖ್ಯ ತಂತ್ರಜ್ಞಾನವಾಗಿ ಬೆಳೆದಿದೆ. ದೃಶ್ಯ, ಶ್ರವಣ, ಗ್ರಾಫಿಕ್ಸ್, ವೀಡಿಯೋ, ಅನಿಮೇಶನ್ ಮತ್ತು ಪಠ್ಯಗಳನ್ನು ಬೆಸೆಯುವ ತಂತ್ರಜ್ಞಾನವಾಗಿದೆ. ಈ ಸಮಾವೇಶ ಸಂಶೋಧಕರಿಗೆ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯಾಗಿರುತ್ತದೆ. ಸಮಾವೇಶದ ಉದ್ಘಾಟನೆ 20ರಂದು ಬೆಳಗ್ಗೆ 9 ಗಂಟೆಗೆ ಕಾಲೇಜಿನ ಎಂಬಿಎ, ಎಂಸಿಎ ಸಭಾಂಗಣದಲ್ಲಿ ನಡೆಯಲಿದ್ದು, ಐಐಟಿ ಮದ್ರಾಸ್ ಪ್ರಾಧ್ಯಾಪಕ ಡಾ. ದೇವೇಂದ್ರ ಜಾಲಿಹಾಳ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಜಿ.ಎಸ್. ನಾಗಾರಾಜ್, ಸಹ ಕಾರ್ಯದರ್ಶಿ ಎನ್.ಟಿ.ನಾರಾಯಣ್ ರಾವ್ ಮುಖ್ಯ ಅತಿಥಿಯಾಗಿರುತ್ತಾರೆ. ಎನ್‌ಇಎಸ್ ಅಧ್ಯಕ್ಷ ಜಿ. ನಂಜುಂಡಪ್ಪ ಸಮಾರಂಭದ ಅಧ್ಯಕ್ಷತೆ ವಹಿಸುವರು. ರಾಷ್ಟ್ರದ ವಿವಿಧ ಭಾಗಗಳಿಂದ 55 ವಿಜ್ಞಾನಿಗಳು, ಅಧ್ಯಾಪಕರು, ಸಂಶೋಧಕರು ಮತ್ತು ತಂತ್ರಜ್ಞರು ಸಮಾವೇಶದಲ್ಲಿ ಭಾಗವಹಿಸಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ. ಸುಮಾರು 250 ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.